ಶ್ರೀನಗರ: ಭಾರತೀಯ ಸೇನೆ ಪೂಂಚ್ ನಲ್ಲಿ ಉಗ್ರರ ಒಳನುಸುಳುವಿಕೆ ಯತ್ನವನ್ನು ತಡೆದಿದೆ. ಪೂಂಚ್ ಜಿಲ್ಲೆಯ ಕೃಷ್ಣ ಲೈನ್ ಆಫ್ ಕಂಟ್ರೋಲ್ ಘಟ್ಟಿ ವಲಯದಲ್ಲಿ ಈ ಘತನೆ ನಡೆದಿದೆ.
ಜಮ್ಮು ಮೂಲದ ರಕ್ಷಣಾ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದು, ಇಂದು ಬೆಳಿಗ್ಗೆ 3 ಗಂಟೆ ವೇಳೆಗೆ ಪೂಂಚ್ ಸೆಕ್ಟರ್ ನಲ್ಲಿ ಉಗ್ರರು ಒಳನುಸುಳಲು ಯತ್ನಿಸಿದ್ದರು. ಉಗ್ರರ ಯತ್ನವನ್ನು ಭದ್ರತಾ ಸಿಬ್ಬಂದಿಗಳು ವಿಫಲಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಸೇನೆಯು ಒಳನುಸುಳುವ ಭಯೋತ್ಪಾದಕರ ಮೇಲೆ ಗುಂಡಿನ ದಾಳಿ ನಡೆಸಿತು. ಒಳನುಸುಳುತ್ತಿದ್ದ ಉಗ್ರರು ಮತ್ತು ಸೇನಾ ಸಿಬ್ಬಂದಿ ಕೆಲಕಾಲ ಗುಂಡಿನ ಚಕಮಕಿ ನಡೆಸಿದರು. ಗುಂಡಿನ ಚಕಮಕಿಯಲ್ಲಿ ಓರ್ವ ಯೋಧನಿಗೆ ಗಾಯಗಳಾಗಿವೆ. ಗಾಯಗೊಂಡ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸೇನಾ ಅಧಿಕಾರಿ ತಿಳಿಸಿದ್ದಾರೆ.
“ಈ ಪ್ರದೇಶದಲ್ಲಿ ಕೂಂಬಿಂಗ್ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಶೋಧ ಕಾರ್ಯಾಚರಣೆಯಲ್ಲಿ ನೆಲದ ಮೇಲೆ ಸೈನಿಕರಿಗೆ ಸಹಾಯ ಮಾಡಲು ಹೆಚ್ಚುವರಿ ಪಡೆಗಳನ್ನು ಪ್ರದೇಶಕ್ಕೆ ಧಾವಿಸಲಾಗಿದೆ, ”ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಡಿಯಾಚೆಗಿನ ಉಗ್ರಗಾಮಿಗಳ ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಲು ಜಮ್ಮು-ಕಾಶ್ಮೀರದಲ್ಲಿನ ಎಲ್‌ಒಸಿ ಮತ್ತು ಗಡಿಗಳಲ್ಲಿ ನಿಯೋಜಿಸಲಾದ ಸೇನಾ ಸಿಬ್ಬಂದಿ ಉನ್ನತ ಮಟ್ಟದ ಎಚ್ಚರಿಕೆಯಲ್ಲಿದ್ದಾರೆ ಎಂದು ಅವರು ಹೇಳಿದರು.
ಜುಲೈ 18 ರಂದು, ಉತ್ತರ ಕಾಶ್ಮೀರದ ಕುಪ್ವಾರದ ಕೆರಾನ್ ಸೆಕ್ಟರ್‌ನಲ್ಲಿ ಒಳನುಸುಳುವಿಕೆಯ ಪ್ರಯತ್ನವನ್ನು ಸೇನೆಯು ವಿಫಲಗೊಳಿಸಿತು ಮತ್ತು ಇಬ್ಬರು ಉಗ್ರರನ್ನು ಕೊಂದಿತು ಮತ್ತು ಕೊಲ್ಲಲ್ಪಟ್ಟ ಉಗ್ರರಿಂದ ಆಸ್ಟ್ರಿಯನ್ ನಿರ್ಮಿತ ಸ್ಟೇಯರ್ AUG ಬುಲ್‌ಪಪ್ ಅಸಾಲ್ಟ್ ರೈಫಲ್ ಅನ್ನು ವಶಪಡಿಸಿಕೊಂಡಿತ್ತು.
ಇದಕ್ಕೂ ಮುನ್ನ ಜುಲೈ 14 ರಂದು ಕೆರಾನ್ ಸೆಕ್ಟರ್‌ನಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡುವ ಮೂಲಕ ಸೇನೆ ಮತ್ತೊಂದು ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿತ್ತು.