ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಮಧ್ಯರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಅಪರಿಚಿತ ಭಯೋತ್ಪಾದಕ ಮೃತಪಟ್ಟಿದ್ದು, ಓರ್ವ ಯೋಧ ಗಾಯಗೊಂಡಿದ್ದಾರೆ ಎಂದು ಸೇನಾಧಿಕಾರಿಗಳು ಬುಧವಾರ ತಿಳಿಸಿದೆ.
ಜಮ್ಮು-ಕಾಶ್ಮೀರದ ಕೋವುಟ್, ಕುಪ್ವಾರದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿ ಆಧರಿಸಿ ಸೇನಾಪಡೆ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂದು ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.
ಮೊನ್ನೆ ಮಂಗಳವಾರ ಉಗ್ರರ ಅನುಮಾನಾಸ್ಪದ ಚಲನವಲನವನ್ನು ಗಮಿನಿಸಿದ ಸೇನಾ ಯೋಧರು ಶಂಕಿತರನ್ನು ಸುತ್ತುವರಿದರು. ಪ್ರತಿಯಾಗಿ, ಭಯೋತ್ಪಾದಕರು ಮನಬಂದಂತೆ ಗುಂಡಿನ ದಾಳಿ ನಡೆಸಿದರು, ಇದು ಗುಂಡಿನ ಚಕಮಕಿಗೆ ಕಾರಣವಾಯಿತು.
ಕಳೆದ ರಾತ್ರಿಯಿಂದ ಇಂದು ಬೆಳಗಿನ ಜಾವದವರೆಗೆ ಮುಂದುವರಿದ ಗುಂಡಿನ ಚಕಮಕಿಯಲ್ಲಿ, ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಘಟನೆಯಲ್ಲಿ ಸೇನೆಯ ಎನ್‌ಸಿಒ ಗಾಯಗೊಂಡಿದ್ದಾರೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಸೇನೆ ಹೇಳಿದೆ.