ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮಳೆ ಅರ್ಭಟಕ್ಕೆ ತತ್ತರಿಸಿ ಹೋಗಿದ್ದು, ದೆಹಲಿಯ ಕೋಚಿಂಗ್ ಸೆಂಟರ್‌ಗೆ ಮಳೆ ನೀರು ನುಗ್ಗಿ ಇಬ್ಬರು ವಿದ್ಯಾರ್ಥಿನಿಯರ ಸಾವನ್ನಪ್ಪಿರುವ ಧಾರುಣ ಘಟನೆ ಶನಿವಾರ ರಾತ್ರಿ ವರದಿಯಾಗಿದೆ.
ಹೌದು.. ರಾಜೇಂದ್ರ ನಗರದಲ್ಲಿರುವ ರಾವ್ ಐಎಎಸ್ ಕೋಚಿಂಗ್ ಸೆಂಟರ್‌ಗೆ (Rao IAS Coaching Institute) ನೀರು ನುಗ್ಗಿ ಇಬ್ಬರು ವಿದ್ಯಾರ್ಥಿನಿಯರು ಸಾವಿಗೀಡಾಗಿದ್ದಾರೆ. ಅಲ್ಲದೆ ಮತ್ತೋರ್ವ ವಿದ್ಯಾರ್ಥಿನಿ ಸಿಲುಕಿದ್ದು ಆಕೆಯ ರಕ್ಷಣೆಗೆ ಕಾರ್ಯಾಚರಣೆ ನಡೆದಿದೆ.
ಶನಿವಾರ ಸಂಜೆ ರಾಜೇಂದ್ರ ನಗರದಲ್ಲಿ ಭಾರಿ ಮಳೆಯಾಗಿದ್ದು ಪರಿಣಾಮ ಮಳೆ ಪ್ರವಾಹದ ನೀರು ರಾವ್ ಐಎಎಸ್ ಕೋಚಿಂಗ್ ಸೆಂಟರ್ ನ ನೆಲಮಹಡಿಗೆ ನುಗ್ಗಿದೆ. ಏಕಾಏಕಿ ನೀರು ನುಗ್ಗಿದ್ದರಿಂದ ಅಲ್ಲಿದ್ದ ವಿದ್ಯಾರ್ಥಿನಿಯರು ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಪೈಕಿ ಇಬ್ಬರು ವಿದ್ಯಾರ್ಥಿನಿಯರು ಪ್ರವಾಹದ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ಇಬ್ಬರು ವಿದ್ಯಾರ್ಥಿನಿಯರ ಶವ ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನೆಲ ಮಹಡಿಯಲ್ಲಿದ್ದ ಮತ್ತೋರ್ವ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ವಿದ್ಯಾರ್ಥಿನಿ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಐಎಎಸ್ ಕನಸು ಕಂಡಿದ್ದ ವಿದ್ಯಾರ್ಥಿಗಳು
ಈ ಮೂವರು ವಿದ್ಯಾರ್ಥಿಗಳು ಕೂಡ ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದರು. ಮೃತಪಟ್ಟಿರುವ ಇಬ್ಬರು ವಿದ್ಯಾರ್ಥಿನಿಯರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ತಡರಾತ್ರಿಯಾದರೂ ಮತ್ತೊಬ್ಬ ವಿದ್ಯಾರ್ಥಿಯ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿರುವ ಸೆಂಟ್ರಲ್ ದೆಹಲಿ ಡಿಸಿಪಿ ಎಂ. ಹರ್ಷವರ್ಧನ್, “ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಕೋಚಿಂಗ್ ಸೆಂಟರ್‌ನ ಬೇಸ್‌ಮೆಂಟ್‌ಗೆ ನೀರು ನುಗ್ಗಿದೆ. ನೆಲಮಹಡಿಯಲ್ಲಿದ್ದ ಮೂವರು ವಿದ್ಯಾರ್ಥಿಗಳು ಹೊರಬರಲು ಆಗದೆ, ಮೇಲಿನ ಮಹಡಿಗೂ ಹೋಗಲು ಆಗದೆ ನೀರಿನಲ್ಲೇ ಸಿಲುಕಿರುವ ಸಾಧ್ಯತೆ ಇದೆ. ಇದರಿಂದಾಗಿ ಇಬ್ಬರು ವಿದ್ಯಾರ್ಥಿನಿಯರ ಸಾವುಂಟಾಗಿದೆ. ಕೂಡಲೇ ಎನ್‌ಡಿಆರ್‌ಎಫ್ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಈಗಲೂ ಕಾರ್ಯಾಚರಣೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.