ಭೂಪಾಲ್: ದೇಶದೆಲ್ಲೆಡೆ ಭಾರೀ ಮಳೆಯಾಗುತ್ತಿದೆ. ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಕೆಲವು ಪ್ರದೇಶಗಳು ನಾನಾ ಸಮಸ್ಯೆಗಳನ್ನು ಎದುರಿಸುತ್ತಿವೆ. ಭಾರೀ ಮಳೆಯಿಂದಾಗಿ ನಗರಗಳು ಮತ್ತು ಪಟ್ಟಣಗಳು ಜಲಾವೃತವಾಗುತ್ತಿವೆ. ದೊಡ್ಡ ದೊಡ್ಡ ಕಟ್ಟಡಗಳು, ಸೇತುವೆಗಳು ಕೂಡ ಪ್ರವಾಹಕ್ಕೆ ಕೊಚ್ಚಿ ಹೋದ ಅನೇಕ ಘಟನೆಗಳನ್ನು ನಾವು ನೋಡುತ್ತೇವೆ. ಮತ್ತೊಂದೆಡೆ ಮಳೆ ಸಮೃದ್ಧಿಯಾಗಿರುವುದರಿಂದ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ಸ್ಥಳೀಯ ಆಚಾರ – ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತಿದ್ದಾರೆ.
ಮಳೆ ಬರಿಸಲು ಜನರು ನಡೆಸುವ ವಿವಿಧ ಆಚರಣೆಗಳಲ್ಲಿ ಕತ್ತೆಗಳಿಗೆ ಮದುವೆ ಮಾಡಿಸುವುದು ಕೂಡ ಸೇರಿದೆ. ಮಳೆಗಾಲ ಆರಂಭವಾಗಿ ಒಂದು ಹನಿ ನೀರು ಆಕಾಶದಿಂದ ಭೂಮಿಗೆ ಬೀಳದೆ ಇದ್ದಾಗ ಜನರು ಕತ್ತೆಗಳಿಗೆ ಮದುವೆ ಮಾಡಿಸುತ್ತಾರೆ. ಏಕೆಂದರೆ ಕತ್ತೆಗಳಿಗೆ ಮಾಡುವುದರಿಂದ ವರುಣ ದೇವನ ಕೃಪೆಗೆ ಪಾತ್ರವಾಗುತ್ತೇವೆ ಎಂಬುದು ಜನರ ನಂಬಿಕೆಯಾಗಿದೆ.
ಮಧ್ಯಪ್ರದೇಶದ ಮಂಡ್ಸೌರ್ ಜಿಲ್ಲೆಯ ಹಲವು ಭಾಗಗಳಲ್ಲಿ ಇನ್ನೂ ಸರಿಯಾಗಿ ಮಳೆ ಆರಂಭವಾಗದ ಕಾರಣ ಜನರು ಬರಗಾಲ ಬಾರದೇ ಇರಲು ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ. ಇದಾದ ಕೆಲ ದಿನಗಳಿಗೆ ಪ್ರದೇಶದ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಕತ್ತೆಗಳಿಗೆ ಗುಲಾಬ್ ಜಾಮೂನು ತಿನ್ನಿಸುವ ಮೂಲಕ ಸಂಭ್ರಮಿಸಿದ್ದಾರೆ. ಇಲ್ಲಿನ ಬಹುತೇಕ ಭಾಗಗಳಲ್ಲಿ ಬರಗಾಲ ಬಾರದೇ ಇರಲು ಕತ್ತೆಗಳಿಗೆ ಗುಲಾಬ್ ಜಾಮೂನು ತಿನಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ವರುಣ ದೇವನ ಕೃಪೆಗೆ ಪಾತ್ರವಾಗುತ್ತವೆ ಎಂಬುದು ಅಲ್ಲಿನ ಜನರ ನಂಬಿಕೆ.
ಸದ್ಯ ಈ ಸಂಪ್ರದಾಯಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಹಳ್ಳಿಗರು ಕತ್ತೆಗಳಿಗೆ ಗುಲಾಬ್ ಜಾಮೂನ್ ಅನ್ನು ತಿನ್ನಿಸುತ್ತಿವುದನ್ನು ಕಾಣಬಹುದು. ಕತ್ತೆಗಳಿಗೆ ಸ್ನಾನ ಮಾಡಿಸಿ, ಬಳಿಕ ಹೂವಿನ ಹಾರಗಳನ್ನು ತೊಡಿಸಿ ಪೂಜೆಗೈದು ಸಿಹಿ ತಿನಸು, ವಿಶೇಷವಾಗಿ ಗುಲಾಬ್ ಜಾಮೂನು ತಿನಿಸುವುದು ಇಲ್ಲಿನ ಸಂಪ್ರದಾಯ.
ಇದೊಂದು ವಿಶಿಷ್ಟ ಸಂಪ್ರದಾಯವಾಗಿದ್ದು, ಈ ರೀತಿ ಮಾಡುವುದರಿಂದ ವರುಣ ದೇವನ ಕೃಪೆಗೆ ಪಾತ್ರವಾಗುತ್ತೇವೆ ಎಂಬ ನಂಬಿಕೆ ಜನರಲ್ಲಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಆಶ್ಚರ್ಯಚಕಿತರಾಗಿ ಕಮೆಂಟ್ ಮಾಡುತ್ತಿದ್ದಾರೆ.
ಸುಮಾರು 615 ಕಿಮೀ ದೂರದ ಛತ್ತರ್‌ಪುರದಲ್ಲಿ ಈ ದೃಶ್ಯವು ಒಂದು ಕಾಲ್ಪನಿಕ ಕಥೆಯಂತೆ ಕಾಣುತ್ತಿತ್ತು.ವರುಣನನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ನಿವಾಸಿಗಳು ಹೂವಿನ ಹಾರಗಳು ಮತ್ತು ಸಿಹಿತಿಂಡಿಗಳೊಂದಿಗೆ ಅದ್ಧೂರಿ ಕತ್ತೆಯ ವಿವಾಹವನ್ನು ನಡೆಸಿದರು. ವಧು ಮತ್ತು ವರನ ಕತ್ತೆಗಳನ್ನು ಆಕರ್ಷಕವಾಗ ಸಿಂಗರಿಸಲಾಗಿತ್ತು. ಆದರೂ ಈ ಎರಡು ಕತ್ತೆಗಳು ರಹಸ್ಯವಾಗಿ ಹಸಿರು ಹುಲ್ಲುಗಾವಲುಗಳ ಮಧ್ಯೆ ತಪ್ಪಿಸಿಕೊಳ್ಳಲು ಯೋಜಿಸುತ್ತಿದ್ದರೆ ಆಶ್ಚರ್ಯವಾಗುವುದಿಲ್ಲ.