ನವದೆಹಲಿ: ಸತತ ಮೂರನೇ ಅವಧಿಗೆ ಎನ್ ಡಿಎ ಸಂಸದೀಯ ನಾಯಕರಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಜೂನ್ 9 ರಂದು ಸಂಜೆ 7.15 ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನರೇಂದ್ರ ಮೋದಿ ಮತ್ತು ಅವರ ಸಂಪುಟದ ಕೆಲವು ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ರಾಷ್ಟ್ರಪತಿ ಭವನ ಶುಕ್ರವಾರ ಸಂಜೆ ತಿಳಿಸಿದೆ.
ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆ ಮತ್ತು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡುವ ಕಾರಣದಿಂದ ಜೂನ್ 8, 15 ಮತ್ತು 22, ರಂದು ರಾಷ್ಟ್ರಪತಿ ಭವನದಲ್ಲಿ ನಿಗದಿಯಾಗಿದ್ದ ಚೇಂಜ್ ಆಫ್ ಗಾರ್ಡ್ ರದ್ದುಗೊಳಿಸಲಾಗಿದೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.
ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಮುಖ್ಯಸ್ಥ ಜೆ ಪಿ ನಡ್ಡಾ ಅವರು ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ಮೋದಿ ಆಯ್ಕೆಯಾದ ಪತ್ರವನ್ನು ಹಸ್ತಾಂತರಿಸಿದ ನಂತರ ಮತ್ತು ಎನ್‌ಡಿಎ ನಾಯಕರು ತಮ್ಮ ಬೆಂಬಲ ಪತ್ರವನ್ನು ಸಲ್ಲಿಸಿದ ನಂತರ ರಾಷ್ಟ್ರಪತಿಗಳು ಶುಕ್ರವಾರ ನೂತನ ಸರ್ಕಾರ ರಚನೆಗೆ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ.
ಬಿಜೆಪಿಯ ಎಲ್ಲಾ ಪ್ರಮುಖ ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ, ಜನತಾ ದಳ-ಯುನೈಟೆಡ್, ಶಿವಸೇನೆ ಮತ್ತು ಲೋಕ ಜನಶಕ್ತಿ ಪಕ್ಷ(ರಾಮ್ ವಿಲಾಸ್)ದ ಸಂಸದರು ಮೋದಿ ಜೊತೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿಗಷ್ಟೇ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದುಕೊಂಡಿದೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ ಒಟ್ಟಾಗಿ 293 ಸ್ಥಾನಗಳನ್ನು ಗೆದ್ದಿದೆ. ಬಹುಮತಕ್ಕೆ 272 ಸದಸ್ಯ ಬಲದ ಅಗತ್ಯ ಇದೆ.