ನವದೆಹಲಿ: ಇಲ್ಲಿನ ನರೇಲಾ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಮುಂಜಾನೆ ಆಹಾರ ಸಂಸ್ಕರಣಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟ ಸಂಭವಿಸಿದ ಪರಿಣಾಮ ಮೂವರು ಕಾರ್ಮಿಕರು ಸಾವಿಗೀಡಾಗಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಹೆಸರುಬೇಳೆಯನ್ನು ಸಂಸ್ಕರಿಸುವ ಶಾಯಮ್ ಕೃಪಾ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಕುರಿತು ಮುಂಜಾನೆ 3.35 ಕ್ಕೆ ತಮಗೆ ಕರೆ ಬಂದಿದೆ ಎಂದು ಅವರು ಹೇಳಿದರು.
ಬೆಂಕಿಯು ಕ್ಷಣಾರ್ಧದಲ್ಲಿ ಕಾರ್ಖಾನೆಯನ್ನು ಆವರಿಸಿದೆ. ಈ ವೇಳೆ ಕೆಲವು ಕಾರ್ಮಿಕರು ಕಾರ್ಖಾನೆಯೊಳಗೆ ಸಿಲುಕಿಕೊಂಡರು ಎಂದು ಅಧಿಕಾರಿ ತಿಳಿಸಿದ್ದಾರೆ.
ಹದಿನಾಲ್ಕು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾದವು ಮತ್ತು ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಕಟ್ಟಡದ ಒಳಗಿದ್ದ ಒಂಬತ್ತು ಜನರನ್ನು ರಕ್ಷಿಸಿ ನರೇಲಾದ ಎಸ್‌ಎಚ್‌ಆರ್‌ಸಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆ (ಡಿಎಫ್ಎಸ್) ಅಧಿಕಾರಿಯೊಬ್ಬರು ಬೆಳಿಗ್ಗೆ 8.30ರ ಸುಮಾರಿಗೆ ತಿಳಿಸಿದ್ದಾರೆ.
ಅವರಲ್ಲಿ ಮೂವರು ಶ್ಯಾಮ್ (24), ರಾಮ್ ಸಿಂಗ್ (30) ಮತ್ತು ಬೀರ್ಪಾಲ್ (42) ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದು, ಇತರ ಕಾರ್ಮಿಕರು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೈಪ್‌ಲೈನ್ ಒಂದರಿಂದ ಅನಿಲ ಸೋರಿಕೆಯಾದ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆ ಸೂಚಿಸುತ್ತದೆ ಎಂದು ಅವರು ಹೇಳಿದರು.
ಹೆಸರುಬೇಳೆಯನ್ನು ಹುರಿಯಲು ಬಳಸುವ ಬರ್ನರ್‌ಗಳಿಗೆ ಅನಿಲವನ್ನು ಸರಬರಾಜು ಮಾಡಲಾಗುತ್ತಿತ್ತು. ಬೆಂಕಿ ಹರಡುತ್ತಿದ್ದಂತೆ, ಕಂಪೋಸರ್ ಹೆಚ್ಚು ಬಿಸಿಯಾಗಿ ಸ್ಫೋಟ ಸಂಭವಿಸಿದೆ. ಈ ಸಂಬಂಧ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.