ಭುವನೇಶ್ವರ್: ಒಡಿಶಾದ ಮಾಜಿ ಸಿಎಂ ನವೀನ್ ಪಟ್ನಾಯಕ್ ಆಪ್ತ ವಿಕೆ ಪಾಂಡಿಯನ್ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ.
ಐಎಎಸ್ ಅಧಿಕಾರಿಯಾಗಿದ್ದ ಪಾಂಡಿಯನ್ ನಿವೃತ್ತಿ ಪಡೆದು ಬಿಜೆಡಿಗೆ ಸೇರ್ಪಡೆಯಾಗಿದ್ದರು. ಈಗ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಪಾಂಡಿಯನ್ ವಿರುದ್ಧ ಟೀಕೆಗಳು ವ್ಯಕ್ತವಾಗತೊಡಗಿತ್ತು. ಈಗ ಜೂ.9 ರಂದು ವಿಡಿಯೋ ಮೆಸೇಜ್ ನಲ್ಲಿ ಪಾಂಡಿಯನ್ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಪಾಂಡಿಯನ್ ಬಗ್ಗೆ ವ್ಯಕ್ತವಾಗುತ್ತಿದ್ದ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಒಡಿಶಾ ಮಾಜಿ ಸಿಎಂ ನವೀನ್ ಪಟ್ನಾಯಕ್ ಪಾಂಡಿಯನ್ ಬಗ್ಗೆ ಟೀಕೆ ಮಾಡುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಪಾಂಡಿಯನ್ ತಮ್ಮ ರಾಜಕೀಯ ಉತ್ತರಾಧಿಕಾರಿಯಲ್ಲ ಎಂದೂ ಸ್ಪಷ್ಟನೆ ನೀಡಿದ್ದಾರೆ.
ಪಾಂಡಿಯನ್ ಅವರನ್ನು ನವೀನ್ ಪಟ್ನಾಯಕ್ ಅವರ ಉತ್ತರಾಧಿಕಾರಿ ಎಂದು ಬಿಂಬಿಸಲಾಗುತ್ತಿತ್ತು. ಆದರೆ ನವೀನ್ ಪಟ್ನಾಯಕ್ ಪಾಂಡಿಯನ್ ತಮ್ಮ ಉತ್ತರಾಧಿಕಾರಿಯಲ್ಲ ಎಂದು ಹೇಳಿದ ಬೆನ್ನಲ್ಲೇ ಪಾಂಡಿಯನ್ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಮೇ.10 ರಂದು ಮಾತನಾಡಿದ್ದ ಪಾಂಡಿಯನ್, ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ ಸೋಲು ಕಂಡರೆ ತಾವು ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದರು.