ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ-ಕಿಸಾನ್ ಸಮ್ಮಾನ್ ನಿಧಿಯಿ ಹಣ ಬಿಡುಗಡೆ ಮಾಡುವ ಮೂಲಕ ರೈತರಿಗೆ ಯಾವುದೇ ವಿಶೇಷ ಉಪಕಾರವನ್ನು ಮಾಡಲಿಲ್ಲ, ಒಂದು ತಿಂಗಳ ಹಿಂದೆಯೇ ಹಣ ಬಿಡುಗಡೆ ಮಾಡಬೇಕಾಗಿತ್ತು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಅದು ಸಾಧ್ಯವಾಗಿರಲಿಲ್ಲ, ಹಣವನ್ನು ಈಗ ಬಿಡುಗಡೆ ಮಾಡಲಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಮೋದಿ ಅವರು ತಮ್ಮ ಹೊಸ ಸರ್ಕಾರದ ಮೊದಲ ನಿರ್ಧಾರ ಎಂದು ಹೇಳುತ್ತಿರುವ 17 ನೇ ಕಂತಿನ ಹಣವನ್ನು ಬಿಡುಗಡೆ ಮಾಡುವುದು ತಮ್ಮ ಸರ್ಕಾರದ ನೀತಿಯ ಪ್ರಕಾರ ರೈತರಿಗೆ ನೀಡಬೇಕಾದ ನ್ಯಾಯಸಮ್ಮತ ಹಕ್ಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ರೈತರ ಬಗ್ಗೆ ಅವರಿಗೆ ನಿಜವಾದ ಕಾಳಜಿ ಇದ್ದರೆ, ಪ್ರಧಾನ ಮಂತ್ರಿಗಳು ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನು ಸ್ಥಾನಮಾನವನ್ನು ನೀಡಬೇಕು, ಕೃಷಿ ಸಾಲ ಮನ್ನಾವನ್ನು ಘೋಷಿಸಬೇಕು ಮತ್ತು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವಿಮಾ ಪಾವತಿಯನ್ನು ಖಾತರಿಪಡಿಸಬೇಕು ಎಂದರು.
ತಮ್ಮ ಮೂರನೇ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೋದಿ ಸೋಮವಾರ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿ ನಿಧಿಯ 17 ನೇ ಕಂತಿನ ಬಿಡುಗಡೆಯಡಿ ಸುಮಾರು 20,000 ಕೋಟಿ ಮೊತ್ತವನ್ನು ದೇಶದ ಸುಮಾರು 9.3 ಕೋಟಿ ರೈತರಿಗೆ ನೀಡಲಾಗುತ್ತಿದೆ.
ನಿಧಿ ಬಿಡುಗಡೆಗೆ ಸಹಿ ಹಾಕಿದ ಬಳಿಕ ಮಾತನಾಡಿದ ಮೋದಿ, "ನಮ್ಮದು 'ಕಿಸಾನ್ ಕಲ್ಯಾಣ (ರೈತರ ಕಲ್ಯಾಣ)'ಕ್ಕೆ ಸಂಪೂರ್ಣ ಬದ್ಧವಾಗಿರುವ ಸರ್ಕಾರ, ಆದ್ದರಿಂದ ಅಧಿಕಾರ ವಹಿಸಿಕೊಂಡ ಮೇಲೆ ಸಹಿ ಮಾಡಿದ ಮೊದಲ ಕಡತವು ಇದಕ್ಕೆ ಸಂಬಂಧಿಸಿದೆ. ಮುಂದಿನ ದಿನಗಳಲ್ಲಿ ನಾವು ರೈತರು ಮತ್ತು ಕೃಷಿ ಕ್ಷೇತ್ರಕ್ಕಾಗಿ ಇನ್ನಷ್ಟು ಕೆಲಸ ಮಾಡಬೇಕೆಂದು ಬಯಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನು ಟೀಕಿಸಿರುವ ಜೈರಾಮ್ ರಮೇಶ್, ಪ್ರಧಾನ ಮಂತ್ರಿ ಈ ಕಡತಕ್ಕೆ ಸಹಿ ಹಾಕುವ ಮೂಲಕ ಯಾರಿಗೂ ದೊಡ್ಡ ಉಪಕಾರ ಮಾಡಿಲ್ಲ: ಇದು ಅವರ ಸರ್ಕಾರದ ಸ್ವಂತ ನೀತಿಯ ಪ್ರಕಾರ ರೈತರಿಗೆ ನೀಡಬೇಕಾದ ನ್ಯಾಯಸಮ್ಮತ ಹಕ್ಕುಗಳು ಎಂದಿದ್ದಾರೆ.