ಪುಣೆ: ಮೇ 19 ರಂದು ಪುಣೆಯಲ್ಲಿ ನಡೆದ ಪೋರ್ಶೆ ಕಾರು ಅಪಘಾತದಲ್ಲಿ ಭಾಗಿಯಾಗಿದ್ದ ಅಪ್ರಾಪ್ತ ಬಾಲಕನ ತಂದೆಯ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ.
ಮೇ 19 ರಂದು ಕಲ್ಯಾಣಿ ನಗರದಲ್ಲಿ ಕುಡಿದ ಅಮಲಿನಲ್ಲಿ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಪೋರ್ಶೆ ಕಾರು, ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಐಟಿ ಉದ್ಯೋಗಿಗಳು ಮೃತಪಟ್ಟಿದ್ದರು.
ರಿಯಲ್ ಎಸ್ಟೇಟ್ ಡೆವಲಪರ್ ಆಗಿರುವ ಬಾಲಕನ ತಂದೆ, ತಾತ ಮತ್ತು ತಾಯಿ ಸೇರಿ ಕೆಲವರು ಘಟನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜೈಲಿನಲ್ಲಿದ್ದಾರೆ.
ಇದೀಗ ಪಿಂಪ್ರಿ ಚಿಂಚ್‌ವಾಡ್‌ನ ನ್ಯಾನ್ಸಿ ಬ್ರಹ್ಮಾ ರೆಸಿಡೆನ್ಸಿಯ ನಿವಾಸಿ ವಿಶಾಲ್ ಅಡ್ಸುಲ್ ವಾಕಾಡ್ ಪೊಲೀಸರಿಗೆ ಬಾಲಕನ ತಂದೆ ವಿರುದ್ಧ ದೂರು ನೀಡಿದ್ದು, ರೆಸಿಡೆನ್ಸಿಯಲ್ ಸೊಸೈಟಿಗೆ ಖಾಲಿ ಜಾಗವನ್ನು ಮಂಜೂರು ಮಾಡಿಲ್ಲ ಮತ್ತು ಸೊಸೈಟಿ ಒಪ್ಪಿಗೆಯಿಲ್ಲದೆ ಎರಡು ಹೆಚ್ಚುವರಿ ವಿಂಗ್ ಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಡ್ಸುಲ್ ಅವರ ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ), 409 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಅಡಿ ಬಾಲಕನ ತಂದೆ ಮತ್ತು ಇತರ ನಾಲ್ವರ ವಿರುದ್ಧ ವಂಚನೆ ಕೇಸ್ ದಾಖಲಿಸಲಾಗಿದೆ.