ನವದೆಹಲಿ: ಯಾವುದೇ ಕಾರಣಕ್ಕೂ NDA ದುರ್ಬಲಗೊಳಿಸಲು ಪ್ರಯತ್ನಿಸುವುದಿಲ್ಲ ಎಂದು ಹೇಳುವ ಮೂಲಕ ಸ್ಪೀಕರ್ ವಿಚಾರವಾಗಿ INDIA ಕೂಟಕ್ಕೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಟಾಂಗ್ ನೀಡಿದೆ.
ಟಿಡಿಪಿ ಅಭ್ಯರ್ಥಿಯೇ ಲೋಕಸಭೆ ಸ್ಪೀಕರ್ ಆಗುವುದಾದರೆ, ಇಂಡಿಯಾ ಒಕ್ಕೂಟದ (INDIA Bloc) ಬೆಂಬಲವು ಟಿಡಿಪಿಗೆ ಇರಲಿದೆ ಎಂಬ ಶಿವಸೇನೆ (ಉದ್ಧವ್ ಠಾಕ್ರೆ ಬಣ) ವಕ್ತಾರ ಸಂಜಯ್ ರಾವತ್ (Sanjay Raut) ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಯು ''ಲೋಕಸಭೆ ಸ್ಪೀಕರ್ ಆಯ್ಕೆ ವಿಚಾರದಲ್ಲಿ ಬಿಜೆಪಿ ತೀರ್ಮಾನವೇ ಅಂತಿಮ'' ಎಂದು ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಯು ವಕ್ತಾರ ಕೆಸಿ ತ್ಯಾಗಿ ಅವರು, 'ಲೋಕಸಭೆ ಸ್ಪೀಕರ್ ಆಯ್ಕೆ ವಿಚಾರದಲ್ಲಿ ಬಿಜೆಪಿ ತೀರ್ಮಾನವೇ ಅಂತಿಮ. ಸ್ಪೀಕರ್ ಹುದ್ದೆ ಆಯ್ಕೆ ವಿಚಾರದಲ್ಲಿ ಬಿಜೆಪಿಗೆ ಮೊದಲ ಹಕ್ಕಿದೆ ಮತ್ತು ಇಂಡಿಯಾ ಒಕ್ಕೂಟ ನಾಯಕರ ಹೇಳಿಕೆಗಳು ಆಕ್ಷೇಪಾರ್ಹವಾಗಿವೆ. "ಲೋಕಸಭಾ ಸ್ಪೀಕರ್ ಸ್ಥಾನವು ಸದನದ ಅತ್ಯಂತ ಗೌರವಾನ್ವಿತ ಹುದ್ದೆಯಾಗಿದ್ದು, ಆ ಸ್ಥಾನದ ಮೇಲೆ ಆಡಳಿತ ಪಕ್ಷಕ್ಕೆ ಮೊದಲ ಹಕ್ಕಿದೆ ಎಂದು ಹೇಳಿದ್ದಾರೆ.
ಅಂತೆಯೇ ಬಿಜೆಪಿ ಪಕ್ಷವು ಸ್ಪೀಕರ್ ಸ್ಥಾನ ಪಡೆದರೆ, ಅದು ಜೆಡಿಯು, ಟಿಡಿಪಿ ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್ ಜೆಪಿ ನಡುವೆ ಬಿರುಕು ಮೂಡಲು ಕಾರಣವಾಗುತ್ತದೆ. ಮೈತ್ರಿ ಒಡೆಯುತ್ತದೆ ಎಂಬ ಹೇಳಿಕೆಗಳನ್ನು ತ್ಯಾಗಿ ತಿರಸ್ಕರಿಸಿದರು.
ಯಾವುದೇ ಕಾರಣಕ್ಕೂ NDA ದುರ್ಬಲಗೊಳಿಸಲು ಪ್ರಯತ್ನಿಸುವುದಿಲ್ಲ
"ನಾನು ಕಳೆದ 35 ವರ್ಷಗಳಿಂದ ಎನ್‌ಡಿಎಯಲ್ಲಿದ್ದೇನೆ. ಬಿಜೆಪಿ ಎಂದಿಗೂ ಯಾವುದೇ ಪಕ್ಷವನ್ನು ಒಡೆಯಲು ಪ್ರಯತ್ನಿಸಲಿಲ್ಲ. ಟಿಡಿಪಿ ಮತ್ತು ಜೆಡಿಯು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಆದರೆ ಅವರು ಎಂದಿಗೂ ಎನ್‌ಡಿಎ ದುರ್ಬಲಗೊಳಿಸಲು ಪ್ರಯತ್ನಿಸುವುದಿಲ್ಲ ಎಂದು ಹೇಳಿದರು.
ಬಿಜೆಪಿಗೆ ಸ್ವಂತ ಬಹುಮತ ಇಲ್ಲದಿರುವುದರಿಂದ ಎನ್‌ಡಿಎ ಸರ್ಕಾರದ ಉಳಿವಿಗೆ ಜೆಡಿಯು ಮತ್ತು ಟಿಡಿಪಿ ಬೆಂಬಲ ನಿರ್ಣಾಯಕವಾಗಿದೆ. ಅಂತೆಯೇ ಜೆಡಿಯು ಪಕ್ಷವು 16 ಸಂಸದರನ್ನು ಹೊಂದಿದ್ದರೆ, ಟಿಡಿಪಿ 12 ಸಂಸದರನ್ನು ಹೊಂದಿದೆ. ಎರಡೂ ಪಕ್ಷಗಳ ನಾಯಕರಾದ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಅವರು ನಾವು ಎನ್‌ಡಿಎ ಜತೆ ನಿಲ್ಲುತ್ತೇವೆ ಎಂದಿದ್ದಾರೆ.
ನರೇಂದ್ರ ಮೋದಿ ಅವರು ಸಂಪುಟ ರಚನೆಯ ವೇಳೆಯೂ ಪ್ರಾಬಲ್ಯ ಸಾಧಿಸಿದ್ದರು. ಕೇಂದ್ರ ಗೃಹ, ರಕ್ಷಣೆ, ಹಣಕಾಸು ಹಾಗೂ ವಿದೇಶಾಂಗ ಖಾತೆಗಳನ್ನು ಬಿಜೆಪಿಯೇ ಉಳಿಸಿಕೊಂಡಿದೆ. ಹಾಗಾಗಿ, ಟಿಡಿಪಿ ಅಭ್ಯರ್ಥಿಯೇ ಸ್ಪೀಕರ್ ಚುನಾವಣೆ ಕಣಕ್ಕೆ ಇಳಿಬಹುದು ಎನ್ನಲಾಗಿದೆ.
ಜೂನ್ 24ರಿಂದ ಜುಲೈ 3ರವರೆಗೆ ಸಂಸತ್ ವಿಶೇಷ ಅಧಿವೇಶನ ನಡೆಯಲಿದ್ದು, ಜೂನ್ 26ರಂದು ಸ್ಪೀಕರ್ ಆಯ್ಕೆ ನಡೆಯುವ ಸಾಧ್ಯತೆ ಇದೆ.