ನವದೆಹಲಿ: ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದ ಬಳಿಯ ರಂಗಪಾಣಿಯಲ್ಲಿ ಸಂಭವಿಸಿದ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತದ ಕುರಿತು ರೈಲ್ವೆ ಸುರಕ್ಷತಾ ಆಯುಕ್ತ(ಸಿಆರ್‌ಎಸ್)ರು ತನಿಖೆ ಆರಂಭಿಸಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ ಹೇಳಿದ್ದಾರೆ.
ರೈಲು ಡಿಕ್ಕಿ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಿನಿ ವೈಷ್ಣವ್ ಅವರು, ಇಂತಹ ಅಪಘಾತಗಳು ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ಈ ಅಪಘಾತದ ಕುರಿತು ರೈಲ್ವೆ ಸುರಕ್ಷತಾ ಆಯುಕ್ತರು ಕೂಲಂಕಷವಾಗಿ ತನಿಖೆ ಮಾಡುತ್ತಾರೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಈಶಾನ್ಯ ಭಾರತವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ನಿರ್ಣಾಯಕ ಮಾರ್ಗದಲ್ಲಿ ರೈಲು ಕಾರ್ಯಾಚರಣೆಗಳನ್ನು ಮರುಸ್ಥಾಪಿಸುವುದು ರೈಲ್ವೆಗೆ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಒತ್ತಿ ಹೇಳಿದರು.
ಈಶಾನ್ಯ ಫ್ರಾಂಟಿಯರ್ ರೈಲ್ವೇ (ಎನ್‌ಎಫ್‌ಆರ್) ಅಧಿಕಾರಿಯ ಪ್ರಕಾರ, ಇಂದು ಬೆಳಗ್ಗೆ ರಂಗಪಾಣಿ ನಿಲ್ದಾಣದ ಬಳಿ ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ 9 ಪ್ರಯಾಣಿಕರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.