ಪುಣೆ: ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎಂವಿಎ ಮಿತ್ರಪಕ್ಷಗಳಾದ ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ(ಯುಬಿಟಿ) ಹಾಗೂ ಎನ್ ಸಿಪಿ(ಎಸ್‌ಪಿ) ಜಂಟಿಯಾಗಿ ಸ್ಪರ್ಧಿಸಲಿವೆ ಎಂದು ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಭಾನುವಾರ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರದ್ ಪವಾರ್, 2024ರ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟದ ಭಾಗವಾಗಿದ್ದ ಸಣ್ಣ ಮಿತ್ರಪಕ್ಷಗಳ ಹಿತಾಸಕ್ತಿಗಳನ್ನು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಕ್ಷಿಸುವುದು ಮಹಾರಾಷ್ಟ್ರದ ಪ್ರಮುಖ ವಿರೋಧ ಪಕ್ಷಗಳ ನೈತಿಕ ಜವಾಬ್ದಾರಿಯಾಗಿದೆ ಎಂದರು.
ಎನ್‌ಸಿಪಿ (ಎಸ್‌ಪಿ), ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ವಿರೋಧ ಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ(ಎಂವಿಎ)ಯ ಮಿತ್ರ ಪಕ್ಷಗಳಾಗಿವೆ. ಇದು ಠಾಕ್ರೆ ನೇತೃತ್ವದ ಸರ್ಕಾರ ಪತನಗೊಳ್ಳುವ ಮೊದಲು ನವೆಂಬರ್ 2019 ರಿಂದ ಜೂನ್ 2022 ರವರೆಗೆ ರಾಜ್ಯದಲ್ಲಿ ಅಧಿಕಾರದಲ್ಲಿತ್ತು.
ಪ್ರತಿಪಕ್ಷಗಳು ಸಾಮೂಹಿಕ ನಾಯಕತ್ವದಲ್ಲಿ ಮಹಾರಾಷ್ಟ್ರದ ಜನರ ಮುಂದೆ ಹೋಗುತ್ತವೆ. ರಾಜ್ಯದಲ್ಲಿ ಬದಲಾವಣೆಯ ಅಗತ್ಯವಿದ್ದು, ಅದನ್ನು ನಿಭಾಯಿಸುವುದು ಪ್ರತಿಪಕ್ಷಗಳ ಮೈತ್ರಿಕೂಟದ ನೈತಿಕ ಹೊಣೆಗಾರಿಕೆಯಾಗಿದೆ ಎಂದು ಶರದ್ ಪವಾರ್ ಹೇಳಿದ್ದಾರೆ.
ರಾಜ್ಯದಲ್ಲಿ ಸೀಟು ಹಂಚಿಕೆ ಕುರಿತು ಮಾತುಕತೆ ಇನ್ನೂ ಪ್ರಾರಂಭವಾಗಿಲ್ಲ. ಆದರೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ.
2024 ರ ಲೋಕಸಭೆ ಚುನಾವಣೆಯಲ್ಲಿ ಜನರು ಎನ್‌ಸಿಪಿ(ಎಸ್‌ಪಿ), ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್‌ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಈ ಮೂರು ಪಕ್ಷಗಳಂತೆ ಎಡಪಕ್ಷಗಳು, ರೈತರು ಮತ್ತು ಕಾರ್ಮಿಕರ ಪಕ್ಷ(ಪಿಡಬ್ಲ್ಯುಪಿ) ಸಹ ಒಕ್ಕೂಟದ ಭಾಗವಾಗಿದ್ದರೂ ನಾವು ಅವರಿಗೆ ಲೋಕಸಭೆಯಲ್ಲಿ ಸ್ಥಾನಗಳನ್ನು ನೀಡಲು ಸಾಧ್ಯವಾಗಲಿಲ್ಲ. ಈ ಪಕ್ಷಗಳ ಹಿತಾಸಕ್ತಿಗಳನ್ನು ಕಾಪಾಡುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ ಅವರು ತಿಳಿಸಿದ್ದಾರೆ.