ಬಿಲ್ ಗೇಟ್ಸ್ ಜೊತೆ ಚಾಯ್ ವಾಲಾ ಡಾಲಿ
ಬಿಲ್ ಗೇಟ್ಸ್ ಜೊತೆ ಚಾಯ್ ವಾಲಾ ಡಾಲಿ  
ದೇಶ

'ಅವರು ಬಿಲ್ ಗೇಟ್ಸ್ ಎಂದು ನನಗೆ ಗೊತ್ತಾಗಲಿಲ್ಲ.. ಚಹಾ ಕುಡಿದು, ವಾವ್ ಡಾಲಿ ಕಿ ಚಾ... ಎಂದರು'

Sumana Upadhyaya

ನಾಗ್ಪುರ: ಜಗತ್ತಿನ ಖ್ಯಾತ ಬಿಲಿಯನೇರ್ ಬಿಲ್ ಗೇಟ್ಸ್‌ಗೆ ಟೀ ನೀಡಿ ವಿಡಿಯೋ ವೈರಲ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾದ ಡಾಲಿ ಚಾಯ್‌ವಾಲಾಗೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಎಂದು ಗುರುತು ಸಿಕ್ಕಿರಲಿಲ್ಲವಂತೆ.

ನಾಗ್ಪುರದ ರಸ್ತೆ ಬದಿಯ ಚಹಾ ಮಾರಾಟಗಾರನನ್ನು ಎಎನ್ ಐ ಸುದ್ದಿಸಂಸ್ಥೆ ಪ್ರತಿನಿಧಿ ಮಾತನಾಡಿಸಿದಾಗ, ''ನನಗೆ ಅವರು ಬಿಲ್ ಗೇಟ್ಸ್, ಅಷ್ಟು ದೊಡ್ಡ ವ್ಯಕ್ತಿ ಎಂದು ಗೊತ್ತಿರಲಿಲ್ಲ, ಯಾರೋ ವಿದೇಶದ ಗ್ರಾಹಕರು ಎಂದು ಭಾವಿಸಿ ಎಲ್ಲಾ ಗ್ರಾಹಕರಿಗೆ ನೀಡುವಂತೆ ಅವರಿಗೆ ಸಹ ಚಹಾ ಕೊಟ್ಟೆ. ಮರುದಿನ, ಕೆಲಸಕ್ಕೆ ಬಂದಾಗಲೇ ನನಗೆ ಗೊತ್ತಾಗಿದ್ದು ಅವರು ಬಿಲ್ ಗೇಟ್ಸ್, ಅಷ್ಟು ದೊಡ್ಡ ವ್ಯಕ್ತಿ ಎಂದು'' ಎನ್ನುತ್ತಾರೆ ಡಾಲಿ.

ಚಹಾ ಕುಡಿಯಲು ಅವರು ನನ್ನ ಬಳಿ ಬಂದಿದ್ದಾಗ ಅವರ ಬಳಿ ನಾವು ಸ್ವಲ್ಪವೂ ಮಾತನಾಡಿರಲಿಲ್ಲ. ಅವರು ನನ್ನ ಪಕ್ಕದಲ್ಲಿ ನಿಂತಿದ್ದರು, ನಾನು ನನ್ನ ಕೆಲಸದಲ್ಲಿ ನಿರತನಾಗಿದ್ದೆ. ನನ್ನ ಚಹಾವನ್ನು ಕುಡಿದ ನಂತರ ಅವರು "ವಾವ್, ಡಾಲಿ ಕಿ ಚಾಯ್" ಎಂದು ಹೇಳಿದರು ಎಂದರು.

ಈತನ ವಿಶಿಷ್ಟ ಉಡುಪಿನ ಬಗ್ಗೆ ಕೇಳಿದಾಗ "ನಾನು ಈ ಶೈಲಿಯನ್ನು ದಕ್ಷಿಣ ಭಾರತದ ಚಲನಚಿತ್ರಗಳನ್ನು ನೋಡಿ ಕಾಪಿ ಮಾಡಿಕೊಳ್ಳುತ್ತಿದ್ದೇನೆ'' ಎಂದರು.

ಪ್ರಧಾನಿಯವರಿಗೆ ಚಹಾ ನೀಡುವ ಆಸೆ: ಬಿಲ್ ಗೇಟ್ಸ್ ಗೆ ಚಹಾ ನೀಡಿದ ಡಾಲಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಚಹಾ ನೀಡುವ ಇಚ್ಛೆಯಿದೆಯಂತೆ. "ಇಂದು ನಾನು 'ನಾಗ್ಪುರದ ಡಾಲಿ ಚಾಯ್ವಾಲಾ' ಆಗಿದ್ದೇನೆ.ಯಾವತ್ತಾದರೂ ಪ್ರಧಾನಿ ಮೋದಿಯವರಿಗೆ ಚಹಾ ನೀಡುವ ಆಸೆಯಿದೆ ಎಂದರು.

ಬಿಲ್ ಗೇಟ್ಸ್ ಚಹಾ ಸೇವಿಸುತ್ತಿರುವ ವಿಡಿಯೊ ಆನ್‌ಲೈನ್‌ನಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ. ಡಾಲಿ ಚಾಯ್‌ವಾಲಾ ಇನ್ಸ್ಡಾಗ್ರಾಂ ಖಾತೆಗೆ ಲಕ್ಷಾಂತರ ಮಂದಿ ಅನುಯಾಯಿಗಳಿದ್ದಾರೆ. ಅಲ್ಲಿ ಅವರು ತಮ್ಮ ರೀಲ್ಸ್ ಗಳು ಮತ್ತು ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅನುಯಾಯಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.

SCROLL FOR NEXT