ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ
ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ 
ದೇಶ

ರಾಜಕೀಯಕ್ಕೆ ನ್ಯಾಯಾಧೀಶ?; ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ರಾಜಿನಾಮೆ ಘೋಷಣೆ

Srinivasamurthy VN

ಕೋಲ್ಕತಾ: ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ರಾಜಿನಾಮೆ ಘೋಷಣೆ ಮಾಡಿದ್ದು ರಾಜಕೀಯದತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೇ ಮಂಗಳವಾರ ಅಂದರೆ ಮಾರ್ಚ್ 5 ರಂದು ನ್ಯಾಯಾಂಗವನ್ನು ತ್ಯಜಿಸುವುದಾಗಿ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಅಭಿಜಿತ್ ಗಂಗೋಪಧ್ಯಾಯ ಘೋಷಣೆ ಮಾಡಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಅವರು ನೀಡಿರುವ ತೀರ್ಪು ರಾಜಕೀಯ ಚರ್ಚೆಗಳನ್ನು ಹುಟ್ಟುಹಾಕಿದೆ. ಪಶ್ಚಿಮ ಬಂಗಾಳದ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಗಳಲ್ಲಿನ ಅಕ್ರಮಗಳ ಆರೋಪಗಳ ಬಗ್ಗೆ ತನಿಖೆ ನಡೆಸಲು ಅವರು ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಗೆ ಸೂಚಿಸುವ ಹಲವು ನಿರ್ದೇಶನಗಳನ್ನು ನೀಡಿದ್ದಾರೆ.

ಇದರ ನಡುವೆಯೇ ಕೋಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಮಂಗಳವಾರ ರಾಜೀನಾಮೆ ನೀಡುವುದಾಗಿ ಹೇಳಿರುವುದು ಹಲವರ ಹುಬ್ಬೇರಿಸಿದೆ. ಜಸ್ಟಿಸ್ ಗಂಗೋಪಾಧ್ಯಾಯ ಅವರು ರಾಜಕೀಯಕ್ಕೆ ಪ್ರವೇಶಿಸುವ ಉದ್ದೇಶ ಹೊಂದಿದ್ದಾರೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು, ರಾಜೀನಾಮೆ ಸಲ್ಲಿಸಿದ ನಂತರ ಎಲ್ಲಾ ವಿಷಯಗಳನ್ನೂ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸುವುದಾಗಿ ಅವರು ಹೇಳಿದ್ದಾರೆ.

"ನಾನು ಮಂಗಳವಾರ ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ರಾಜಿನಾಮೆ ಬಳಿಕ ಸುದ್ದಿಗೋಷ್ಠಿ ಕರೆದಿದ್ದು ಅಲ್ಲಿ ಎಲ್ಲ ವಿಚಾರಗಳನ್ನು ಬಹಿರಂಗ ಮಾಡುತ್ತೇನೆ ಎಂದು ಅವರು ಭಾನುವಾರ ತಮ್ಮ ನಿವಾಸದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ತಮ್ಮ ರಾಜೀನಾಮೆಯನ್ನು ಮಂಗಳವಾರ ಭಾರತದ ರಾಷ್ಟ್ರಪತಿಗಳಿಗೆ ಸಲ್ಲಿಸುವುದಾಗಿ ಹೇಳಿದ್ದು, ಅದರ ಪ್ರತಿಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಕೋಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ. ಆದಾಗ್ಯೂ, ಬಂಗಾಳಿ ಸುದ್ದಿ ವಾಹಿನಿ ಎಬಿಪಿ ಆನಂದ್ ಗೆ ನೀಡಿದ ಸಂದರ್ಶನದಲ್ಲಿ, "ಆಡಳಿತ ಪಕ್ಷದ (ಟಿಎಂಸಿ) ನಾಯಕರು (ರಾಜಕೀಯ) ಕ್ಷೇತ್ರದಲ್ಲಿ ಹಲವಾರು ಬಾರಿ ಬಂದು ಸ್ಪರ್ಧಿಸಿ ಎಂದು ನನಗೆ ಸವಾಲು ಹಾಕಿದ್ದಾರೆ, ಹಾಗಾಗಿ ಏಕೆ ಮಾಡಬಾರದು ಎಂದು ನಾನು ಯೋಚಿಸಿದೆ" ಎಂದು ಹೇಳಿದ್ದರು. ಆ ಮೂಲಕ ರಾಜಕೀಯಕ್ಕೆ ಧುಮುಕುವ ಕುರಿತು ಸುಳಿವು ನೀಡಿದ್ದರು.

SCROLL FOR NEXT