ಆಮ್ ಆದ್ಮಿ ಪಕ್ಷದ ಕಚೇರಿ
ಆಮ್ ಆದ್ಮಿ ಪಕ್ಷದ ಕಚೇರಿ PTI
ದೇಶ

'ಜೂನ್ 15ರೊಳಗೆ ಕಚೇರಿ ತೆರವುಗೊಳಿಸಿ': ಆಮ್ ಆದ್ಮಿ ಪಕ್ಷಕ್ಕೆ 'ಸುಪ್ರೀಂ' ಸೂಚನೆ

Srinivasamurthy VN

ನವದೆಹಲಿ: ದೆಹಲಿಯ ರೋಸ್ ಅವೆನ್ಯೂನಲ್ಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಕಚೇರಿಯನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಜೂನ್ 15ರವರೆಗೆ ಕಾಲಾವಕಾಶ ನೀಡಿದೆ.

ತನ್ನ ನ್ಯಾಯಾಂಗ ಮೂಲಸೌಕರ್ಯವನ್ನು ವಿಸ್ತರಿಸಲು ದೆಹಲಿ ಹೈಕೋರ್ಟ್‌ಗೆ ಭೂಮಿಯನ್ನು ಹಂಚಿಕೆ ಮಾಡಲಾದ ಭೂಮಿ ಆಮ್ ಆದ್ಮಿ ಪಕ್ಷ ಕಚೇರಿ ಮಾಡಿಕೊಂಡಿರುವುದನ್ನು ಗಮನಿಸಿರುವ ಸುಪ್ರೀಂ ಕೋರ್ಟ್ ಕಚೇರಿ ಖಾಲಿ ಮಾಡಲು ಜೂನ್ 15 ಗಡವು ನೀಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠವು ಸೋಮವಾರ ಈ ಕುರಿತ ತೀರ್ಪು ನೀಡಿದೆ.

‘ನ್ಯಾಯಾಂಗಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಎಎಪಿಯ ಕಚೇರಿ ಇರುವ ಜಾಗವನ್ನು ದೆಹಲಿ ಹೈಕೋರ್ಟ್‌ಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜೂನ್ 15ರ ಒಳಗೆ ಕಚೇರಿ ತೆರವುಗೊಳಿಸಬೇಕು‘ ಎಂದು ಎಎಪಿಗೆ ಹೇಳಿದೆ.

ಅಂತೆಯೇ ‘ಎಎಪಿ ಕಚೇರಿ ಇರುವ ಜಾಗದ ಮೇಲೆ ಆ ಪಕ್ಷಕ್ಕೆ ಯಾವುದೇ ಅಧಿಕಾರ ಇಲ್ಲ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಜಾಗವನ್ನು ತೆರವುಗೊಳಿಸಲು 2024ರ ಜೂನ್ 15ರವರೆಗೆ ಕಾಲಾವಕಾಶ ನೀಡಲಾಗುತ್ತಿದೆ’ ಎಂದು ಪೀಠ ಹೇಳಿದೆ.

ಎಎಪಿ ಪಕ್ಷದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, 'ದೇಶದ ಆರು ರಾಷ್ಟ್ರೀಯ ಪಕ್ಷಗಳಲ್ಲಿ ಎಎಪಿ ಕೂಡ ಒಂದು. ರಾಷ್ಟ್ರೀಯ ಪಕ್ಷವಾಗಿ ನಮಗೆ ಏನೂ ಸಿಗುವುದಿಲ್ಲ. ಎಲ್ಲರೂ ಉತ್ತಮ ಸ್ಥಳಗಳಲ್ಲಿದ್ದಾಗ ನಮಗೆ ಬಾದರ್‌ಪುರ ನೀಡಲಾಗಿದೆ' ಎಂದು ಸಿಂಘ್ವಿ ಹೇಳಿದರು.

ಈ ಹಿಂದೆ ರೋಸ್ ಅವೆನ್ಯೂದಲ್ಲಿ ಹೈಕೋರ್ಟ್‌ಗೆ ಮಂಜೂರು ಮಾಡಿರುವ ಜಮೀನಿನಲ್ಲಿ ಆಪ್‌ ಪಕ್ಷದಿಂದ ಒತ್ತುವರಿಯಾಗಿತ್ತು. ಈ ಒತ್ತುವರಿ ತೆರವಿಗೆ ಸಭೆ ನಡೆಸುವಂತೆ ದೆಹಲಿ ಸರ್ಕಾರ ಮತ್ತು ದೆಹಲಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.

SCROLL FOR NEXT