ಶರದ್ ಪವಾರ್
ಶರದ್ ಪವಾರ್ 
ದೇಶ

ಭ್ರಷ್ಟಾಚಾರಿಗಳು ಬಿಜೆಪಿ ಸೇರುತ್ತಿದ್ದಾರೆ, ಕೇಸರಿ ಪಕ್ಷ 'ವಾಷಿಂಗ್ ಮೆಷಿನ್' ಆಗಿ ಮಾರ್ಪಟ್ಟಿದೆ: ಶರದ್ ಪವಾರ್

Lingaraj Badiger

ಮುಂಬೈ: ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವವರು "ಶುದ್ಧರಾಗಲು" ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ. ಕೇಸರಿ ಪಕ್ಷ "ವಾಷಿಂಗ್ ಮೆಷಿನ್" ಆಗಿ ಮಾರ್ಪಟ್ಟಿದೆ ಎಂದು ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ಜಾರ್ಖಂಡ್‌ನ ಹೇಮಂತ್ ಸೋರೆನ್ ಮತ್ತು ದೆಹಲಿಯ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೇಂದ್ರ ಸರ್ಕಾರ ಗುರಿಯಾಗಿಸುತ್ತಿದೆ ಎಂದು ಅವರು ಶರದ್ ಪವಾರ್ ಟೀಕಿಸಿದ್ದಾರೆ.

ಇಂದು ಪುಣೆ ಜಿಲ್ಲೆಯ ಲೋನಾವಾಲಾದಲ್ಲಿ ತಮ್ಮ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪವಾರ್, "ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವಾಗ ಅವಿಭಜಿತ ಎನ್‌ಸಿಪಿಯನ್ನು ಟೀಕಿಸುತ್ತಿದ್ದರು. ಸಂಸತ್ತಿನಲ್ಲಿ ಎಲ್ಲರಿಗೂ ಕಿರುಪುಸ್ತಕವನ್ನು ನೀಡಲಾಯಿತು. ಬಿಜೆಪಿ ಅಧಿಕಾರದಲ್ಲಿ ಇಲ್ಲದಿದ್ದಾಗ ಏನೇನು ಅಕ್ರಮಗಳು ನಡೆದಿವೆ ಎಂದು ಅದರಲ್ಲಿ ಹೇಳಲಾಗಿದೆ ಎಂದರು.

"ಪುಸ್ತಕದಲ್ಲಿ ಆದರ್ಶ್ ಹಗರಣ ಬಗ್ಗೆ ಮತ್ತು ಹಗರಣದಲ್ಲಿ ಅಶೋಕ್ ಚವಾಣ್ ಭಾಗಿಯಾಗಿದ್ದಾರೆಂದು ಉಲ್ಲೇಖಿಸಲಾಗಿದೆ. ಆದರೆ ಏಳನೇ ದಿನ ಚವಾಣ್ ಬಿಜೆಪಿಗೆ ಸೇರಿ ಅದರ ರಾಜ್ಯಸಭಾ ಸದಸ್ಯರಾದರು. ಆದ್ದರಿಂದ ಒಂದು ಕಡೆ, ನೀವು(ಬಿಜೆಪಿ) ಆರೋಪಗಳನ್ನು ಮಾಡುತ್ತಿದ್ದೀರಿ. ಮತ್ತೊಂದು ಕಡೆ ಆರೋಪಿತ ವ್ಯಕ್ತಿಗಳನ್ನೇ ನಿಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತೀರಿ" ಎಂದು ತಿರುಗೇಟು ನೀಡಿದರು.

ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆಯೂ ಮಾತನಾಡಿದ ಶರದ್ ಪವಾರ್ ಅವರು, ಈ ಹಗರಣದಲ್ಲಿ ಯಾರ ವಿರುದ್ಧ ಆರೋಪ ಮಾಡಲಾಗಿದೆಯೋ ಅವರು ಇಂದು ಎಲ್ಲಿದ್ದಾರೆ ನೋಡಿ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.

SCROLL FOR NEXT