ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ  
ದೇಶ

ನನಗೀಗ 83 ವರ್ಷ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಇಲ್ಲ, ಒತ್ತಡ ಹೇರಿದರೆ ನೋಡೋಣ: ಮಲ್ಲಿಕಾರ್ಜುನ ಖರ್ಗೆ

Sumana Upadhyaya

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವರದಿಗಳನ್ನು ತಳ್ಳಿಹಾಕಿರುವ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾರ್ಯಕರ್ತರು ಸ್ಪರ್ಧಿಸುವಂತೆ ಕೇಳಿದರೆ ನಾನೂ ಕೂಡ ಸ್ಪರ್ಧಿಸುವ ಇಚ್ಛೆ ತೋರಬಹುದು ಎಂದಿದ್ದಾರೆ.

ಆದರೆ ವಯಸ್ಸಿನ ಕಾರಣದಿಂದ ಈ ಬಾರಿ ಲೋಕಸಭೆ ಚುನಾವಣಾ ಕಣಕ್ಕೆ ತಾವು ಇಳಿಯದಿರಬಹುದು ಎಂದು ಕೂಡ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಕ್ಷೇತ್ರದಿಂದ 2009 ರಿಂದ ಲೋಕಸಭಾ ಸದಸ್ಯರಾಗಿದ್ದು ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು.

ಹಿರಿಯ ನಾಯಕರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದರಿಂದ ಹಿಂದೆ ಸರಿಯುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, "ನಾವು ಹಿಂದೆ ಸರಿಯುತ್ತಿರುವುದು ತಪ್ಪು. ನನಗೀಗ 83 ವರ್ಷ, ನೀವು ಪತ್ರಕರ್ತರು 65 ವರ್ಷಕ್ಕೇ ನಿವೃತ್ತರಾಗುವುದಿಲ್ಲವೇ, ಈಗ ಹೇಳಿ ನನಗೆ ಈಗ 83 ವರ್ಷ'' ಎಂದರು.

"ಒಂದು ಅವಕಾಶ ಸಿಕ್ಕರೆ, ಎಲ್ಲರೂ ಹೋಗಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ನಾನು ಸ್ಪರ್ಧೆ ಮಾಡಬೇಕು ಎಂದು ಒತ್ತಡ ಹೇರಿದರೆ ಖಂಡಿತವಾಗಿಯೂ ನಾನು ಸ್ಪರ್ಧಿಸುತ್ತೇನೆ, ನೋಡಿ, ಕೆಲವೊಮ್ಮೆ ನಾವು ಹಿಂದೆ ಇರುತ್ತೇವೆ, ಕೆಲವೊಮ್ಮೆ ನಾವು ಮುಂಚೂಣಿಯಲ್ಲಿದ್ದೇವೆ, ನಮ್ಮ ಬಳಿಯೂ ಒಂದೇ ಸೀಟಿಗೆ ಬೇಡಿಕೆ ಇಡುವ ಹತ್ತು ಮಂದಿ ಇರುತ್ತಾರೆ'' ಎಂದರು.

ಮೋದಿ ಗ್ಯಾರಂಟಿ ಮತ್ತು ಕಾಂಗ್ರೆಸ್‌ ಗ್ಯಾರಂಟಿ ನಡುವಿನ ಹೋಲಿಕೆ ಕುರಿತು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಖರ್ಗೆ, "ಅವರು ನಮ್ಮ ಗ್ಯಾರಂಟಿ ಕದ್ದಿದ್ದಾರೆ, ನಾವು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ಆರಂಭಿಸಿ ಚುನಾವಣೆ ಗೆದ್ದಿದ್ದೇವೆ, ನಂತರ ತೆಲಂಗಾಣದಲ್ಲಿ ಮಾಡಿದೆವು, ಮೋದಿ ಸಾಹೇಬರು ನಮ್ಮ ಗ್ಯಾರಂಟಿ ಕದ್ದು ನಮ್ಮ ಗ್ಯಾರಂಟಿ' ಎಂದು ಹೇಳುತ್ತಿದ್ದಾರೆ ಎಂದರು.

SCROLL FOR NEXT