ಕೆ ಕವಿತಾ
ಕೆ ಕವಿತಾ 
ದೇಶ

ದೆಹಲಿ ಅಬಕಾರಿ ನೀತಿ ಹಗರಣ: ಇಡಿಯಿಂದ BRS ನಾಯಕಿ, ಕೆಸಿಆರ್ ಪುತ್ರಿ ಕೆ ಕವಿತಾ ಬಂಧನ

Lingaraj Badiger

ನವದೆಹಲಿ/ಹೈದರಾಬಾದ್: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ಬಿಆರ್‌ಎಸ್ ನಾಯಕಿ, ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರನ್ನು ಬಂಧಿಸಿದ್ದಾರೆ.

ಇಂದು ಹೈದರಾಬಾದ್‌ನಲ್ಲಿರುವ ಬಿಆರ್ ಎಸ್ ಎಂಎಲ್ ಸಿ ಕೆ ಕವಿತಾ ಅವರ ನಿವಾಸದ ಮೇಲೆ ದಾಳಿ ನಡೆಸಿದೆ ಇಡಿ ಅಧಿಕಾರಿಗಳು, ಕೆಲವು ಗಂಟೆಗಳ ನಂತರ ಕೆಸಿಆರ್ ಪುತ್ರಿಯನ್ನು ಬಂಧಿಸಿದೆ ಮತ್ತು ಅವರನ್ನು ದೆಹಲಿಗೆ ಕರೆದೊಯ್ಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

44 ವರ್ಷದ ಕೆ ಕವಿತಾ ಅವರನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಇಡಿ ಹಲವು ಬಾರಿ ವಿಚಾರಣೆಗೆ ಒಳಪಡಿಸಿದೆ ಮತ್ತು ಅವರ ಹೇಳಿಕೆಯನ್ನು ದಾಖಲಿಸಿದೆ. ಆದರೆ ಈ ವರ್ಷ ಇಡಿ ನೀಡಿದ್ದ ಎರಡು ಸಮನ್ಸ್‌ಗಳನ್ನು ಅವರು ತಪ್ಪಿಸಿದ್ದರು.

'ಸೌತ್ ಗ್ರೂಪ್' ಎಂಬುದು ಕವಿತಾ, ಅರಬಿಂದೋ ಫಾರ್ಮಾ ಪ್ರವರ್ತಕ ಶರತ್ ರೆಡ್ಡಿ, ವೈಎಸ್ಆರ್ ಕಾಂಗ್ರೆಸ್ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಮತ್ತು ಇತರರೊಂದಿಗೆ ಸಂಪರ್ಕ ಹೊಂದಿದ ಮದ್ಯದ ಕಾರ್ಟೆಲ್ ಆಗಿದೆ. ಪಿಳ್ಳೈ ಅವರು ಕವಿತಾ ಅವರ ಬೇನಾಮಿ ಹೂಡಿಕೆಗಳನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಇಡಿ ಆರೋಪಿಸಿದೆ.

ಇಡಿ ದಾಳೆ ಬಗ್ಗೆ ಪ್ರತಿಕ್ರಿಯಿಸಿದ ಕೆ ಕವಿತಾ ಅವರ ಸಹೋದರ ಹಾಗೂ ತೆಲಂಗಾಣ ಮಾಜಿ ಸಚಿವ ಕೆಟಿ ರಾಮರಾವ್ ಅವರು, "ಶೋಧ ಕಾರ್ಯ ಮುಗಿದಿದೆ ಮತ್ತು ಬಂಧನ ವಾರಂಟ್ ಅನ್ನು ಪ್ರಸ್ತುತಪಡಿಸಲಾಗಿದೆ. ಆದರೆ ಕವಿತಾ ಟ್ರಾನ್ಸಿಟ್ ವಾರಂಟ್ ಇಲ್ಲ ಎಂದು ಹೇಳುತ್ತಿದ್ದಾರೆ" ಎಂದು ಹೇಳಿದ್ದಾರೆ. ಈ ಮೂಲಕ ಇಡಿ ದಾಳಿ ಮತ್ತು ಕೆ.ಕವಿತಾ ಅವರ ಬಂಧನವನ್ನು ಖಚಿತಪಡಿಸಿದ್ದಾರೆ.

SCROLL FOR NEXT