ಲೋಕಸಭಾ ಚುನಾವಣೆ
ಲೋಕಸಭಾ ಚುನಾವಣೆ 
ದೇಶ

Loksabha Election 2024: ಶುಕ್ರವಾರ ಮತದಾನ; ದಿನಾಂಕ ಬದಲಾವಣೆಗೆ ಚುನಾವಣಾ ಆಯೋಗದ ಮೊರೆ ಹೋದ ಮುಸ್ಲಿಂ ಸಂಘಟನೆ

Srinivasamurthy VN

ತಿರುವನಂತಪುರಂ: ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು ಇದೀಗ ಈ ದಿನಾಂಕದಲ್ಲಿ ಮತದಾನ ಮಾಡಬಾರದು ಎಂದು ಮುಸ್ಲಿಂ ಸಂಘಟನೆಯೊಂದು ಚುನಾವಣಾ ಆಯೋಗದ ಮೊರೆ ಹೋಗಿದೆ.

ಹೌದು.. ಭಾರತೀಯ ಚುನಾವಣಾ ಆಯೋಗವು 18ನೇ ಲೋಕಸಭೆ ಚುನಾವಣೆಗೆ ಚುನಾವಣಾ ದಿನಾಂಕಗಳನ್ನು ಘೋಷಿಸಿದ ಒಂದು ದಿನದ ನಂತರ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಕೇರಳ ಮತ್ತು ತಮಿಳುನಾಡಿನಲ್ಲಿ ಶುಕ್ರವಾರದಂದು ನಿಗದಿಯಾಗಿರುವ ಮತದಾನದ ದಿನಾಂಕಗಳನ್ನು ಬದಲಾಯಿಸುವಂತೆ ಮನವಿ ಮಾಡಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ಮನವಿ ಅರ್ಜಿ ಸಲ್ಲಿಸುವುದಾಗಿ ಸಂಘಟನೆ ಭಾನುವಾರ ಹೇಳಿದೆ.

ತಮಿಳುನಾಡಿಗೆ ಏಪ್ರಿಲ್ 19 ರಂದು ಮತ್ತು ಕೇರಳದಲ್ಲಿ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದ್ದು, ಎರಡೂ ದಿನಾಂಕಗಳು ಶುಕ್ರವಾರ ಬರುತ್ತವೆ. ಶುಕ್ರವಾರ ಮುಸ್ಲಿಮರಿಗೆ ಪ್ರಮುಖ ದಿನವಾಗಿರುವುದರಿಂದ ಮತದಾರರು, ಅಧಿಕಾರಿಗಳು ಮತ್ತು ಅಭ್ಯರ್ಥಿಗಳಿಗೆ ಅನಾನುಕೂಲವಾಗುವುದರಿಂದ ಕೇರಳ ಮತ್ತು ತಮಿಳುನಾಡಿನ ಚುನಾವಣಾ ದಿನಾಂಕಗಳನ್ನು ಬದಲಾಯಿಸಬೇಕು ಎಂದು ಕಾಂಗ್ರೆಸ್ ಮಿತ್ರಕೂಟದ ಪ್ರಮುಖ ಪಕ್ಷ ಐಯುಎಂಎಲ್ ಹೇಳಿದೆ.

ಈ ಕುರಿತು ಮಾತನಾಡಿರುವ IUML ನ ರಾಜ್ಯ ಪ್ರಧಾನ ಕಾರ್ಯದರ್ಶಿ PM A ಸಲಾಂ, ಪ್ರಾರ್ಥನೆಗಾಗಿ ಮಸೀದಿಗಳಲ್ಲಿ ಸೇರುವ ಮುಸ್ಲಿಮರಿಗೆ ಶುಕ್ರವಾರವು ಪ್ರಮುಖ ದಿನವಾಗಿದೆ. ಶುಕ್ರವಾರದ ಮತದಾನದ ಘೋಷಣೆಯು ಮತದಾರರಿಗೆ, ಅಭ್ಯರ್ಥಿಗಳಿಗೆ, ಪೋಲಿಂಗ್ ಏಜೆಂಟ್‌ಗಳಿಗೆ ಮತ್ತು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಈ ಕುರಿತು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಮತದಾನ ದಿನಾಂಕ ಬದಲಾವಣೆಗೆ 'ಸಮಸ್ತ' ಆಗ್ರಹ

ಇದೇ ವಿಚಾರವಾಗಿ ಮುಸ್ಲಿಂ ಸಂಘಟನೆ ಸಮಸ್ತ ಅಧ್ಯಕ್ಷ ಜೆಫ್ರಿ ಮುತ್ತುಕೋಯ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಆಲಿಕುಟ್ಟಿ ಮುಸ್ಲಿಯಾರ್ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಇ-ಮೇಲ್ ಮೂಲಕ ಮನವಿ ಮಾಡಿದ್ದು, ಶುಕ್ರವಾರದಂದು ಜುಮಾ ನಮಾಝ್ ಮಾಡುವ ವೇಳೆ ಮತದಾನ ಮಾಡುವುದರಿಂದ ಅಧಿಕಾರಿಗಳು ಹಾಗೂ ಮತದಾರರಿಗೆ ತೊಂದರೆಯಾಗುತ್ತದೆ. ಮುಸ್ಲಿಮ್ ನೌಕರರು ಮತ್ತು ಬೂತ್ ಏಜೆಂಟರಿಗೆ ನಮಾಝ್ ಗೆ ತೊಂದರೆಯಾಗಲಿದ್ದು, ಏಪ್ರಿಲ್ 26ಕ್ಕೆ ನಿಗದಿಯಾಗಿದ್ದ ಚುನಾವಣೆ ದಿನಾಂಕವನ್ನು ಮತ್ತೊಂದು ದಿನಕ್ಕೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

SCROLL FOR NEXT