ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 
ದೇಶ

ದೆಹಲಿ ಜಲ ಮಂಡಳಿ ಪ್ರಕರಣ: ಇ.ಡಿ ತನಿಖೆಗೆ ಅರವಿಂದ ಕೇಜ್ರಿವಾಲ್ ಗೈರು; ಸಮನ್ಸ್ ಕಾನೂನುಬಾಹಿರ ಎಂದ ಎಎಪಿ

Ramyashree GN

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ದೆಹಲಿ ಜಲ ಮಂಡಳಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಗೈರಾಗಿದ್ದಾರೆ. ಆಮ್ ಆದ್ಮಿ ಪಕ್ಷವು ಸಮನ್ಸ್ ಅನ್ನು 'ಕಾನೂನುಬಾಹಿರ' ಎಂದು ಬಣ್ಣಿಸಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೇಜ್ರಿವಾಲ್ ಅವರನ್ನು ಗುರಿಯಾಗಿಸಲು ಮತ್ತು ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡುವುದನ್ನು ತಡೆಯಲು ಜಾರಿ ನಿರ್ದೇಶನಾಲಯವನ್ನು (ಇ.ಡಿ) ಬಳಸುತ್ತಿದೆ. ಸಮನ್ಸ್ ಕಾನೂನುಬಾಹಿರವಾಗಿದೆ. ಇ.ಡಿ ಬಳಸಿ ಲೋಕಸಭೆ ಚುನಾವಣೆ ಎದುರಿಸಲು ಬಿಜೆಪಿ ಬಯಸಿದೆ ಎಂದು ಎಎಪಿ ಆರೋಪಿಸಿದೆ.

ದೆಹಲಿ ಜಲ ಮಂಡಳಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸೋಮವಾರ ತನ್ನ ಮುಂದೆ ಹಾಜರಾಗುವಂತೆ ಇ.ಡಿ ಅರವಿಂದ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿತ್ತು.

ಕೇಜ್ರಿವಾಲ್ ಅವರು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿಯೂ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈ ಹಿಂದೆ ಇ.ಡಿ ನೀಡಿದ್ದ ಎಂಟು ಸಮನ್ಸ್‌ಗಳನ್ನು ಕಾನೂನುಬಾಹಿರ ಎಂದು ಕರೆದಿದ್ದು, ವಿಚಾರಣೆಗೆ ಗೈರಾಗಿದ್ದಾರೆ.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾರ್ಚ್ 21 ರಂದು ವಿಚಾರಣೆಗೆ ಹಾಜರಾಗುವಂತೆ ತನಿಖಾ ಸಂಸ್ಥೆಯು ಕೇಜ್ರಿವಾಲ್ ಅವರಿಗೆ ಒಂಬತ್ತನೇ ಸಮನ್ಸ್ ಜಾರಿ ಮಾಡಿದೆ.

ಕೇಜ್ರಿವಾಲ್‌ ಅವರಿಗೆ ನೀಡಿರುವ ಸಮನ್ಸ್‌ಗಳ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಎಎಪಿಯ ದೆಹಲಿ ಘಟಕದ ಸಂಚಾಲಕ ಗೋಪಾಲ್ ರೈ, 'ಇಡಿ ಬಿಜೆಪಿಯ ರಾಜಕೀಯ ಕಾರ್ಯಸೂಚಿಯಂತೆ ಕೆಲಸ ಮಾಡುವುದನ್ನು ಯಾವಾಗ ನಿಲ್ಲಿಸುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಇಡಿ ಸಮನ್ಸ್ ನೀಡಿದ್ದು, ಅವು ಕಾನೂನುಬಾಹಿರ ಎಂದು ಮುಖ್ಯಮಂತ್ರಿಗಳು ಉತ್ತರಿಸಿದ್ದಾರೆ. ಇ.ಡಿ ಅವರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿತ್ತು. ಪ್ರಕರಣ ನ್ಯಾಯಾಲಯದಲ್ಲಿರುವಾಗ ಮತ್ತೊಮ್ಮೆ ಸಮನ್ಸ್ ಕಳುಹಿಸುವ ತುರ್ತು ಏನಿದೆ’ ಎಂದು ಪ್ರಶ್ನಿಸಿದರು.

'ಬಿಜೆಪಿಯು ಕೇಜ್ರಿವಾಲ್ ಅವರನ್ನು ಬಂಧಿಸಲು ಬಯಸಿದರೆ, ಅವರಿಗೆ ಸಮನ್ಸ್ ನೀಡುವ ಅಗತ್ಯವಿಲ್ಲ. ಅವರು ಯಾವಾಗ ಬೇಕಾದರೂ ಅವರನ್ನು ಬಂಧಿಸಬಹುದು. ನಿಮಗೆ ಸಂವಿಧಾನ ಮತ್ತು ಕಾನೂನಿನಲ್ಲಿ ನಂಬಿಕೆ ಇದ್ದರೆ, ನ್ಯಾಯಾಲಯದ ತೀರ್ಪಿಗಾಗಿ ಕಾಯಿರಿ. ನಾವೂ ಸಹ ಕಾಯುತ್ತಿದ್ದೇವೆ. ಏಪ್ರಿಲ್ 1ರಂದು ನ್ಯಾಯಾಲಯವು ಈ ವಿಷಯವನ್ನು ಆಲಿಸಲಿದೆ' ಎಂದು ಎಎಪಿ ನಾಯಕ ಹೇಳಿದರು.

ಆಪಾದಿತ ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಕೇಜ್ರಿವಾಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಇ.ಡಿ ದೆಹಲಿಯ ಮ್ಯಾಜಿಸ್ಟ್ರಿಯಲ್ ನ್ಯಾಯಾಲಯದಲ್ಲಿ ಎರಡು ದೂರುಗಳನ್ನು ದಾಖಳಿಸಿದೆ. ಈ ಸಂಬಂಧ ಕಳೆದ ಶನಿವಾರ ನ್ಯಾಯಾಲಯ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿತ್ತು.

ಇ.ಡಿಯನ್ನು 'ರಾಜಕೀಯ ಸಾಧನವಾಗಿ ಬಳಸಲಾಗುತ್ತಿದೆ. ಸಮನ್ಸ್‌ಗಳ ಕಾನೂನುಬದ್ಧತೆಗೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡುತ್ತಿರುವಾಗ ಇ.ಡಿ ನಿರಂತರವಾಗಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಏಕೆ ಸಮನ್ಸ್ ಕಳುಹಿಸುತ್ತಿದೆ?. ನ್ಯಾಯಾಲಯವು ಈ ವಿಷಯವನ್ನು ಪರಿಗಣಿಸಿದೆ. ಇ.ಡಿ ಏಕೆ ಕಾನೂನನ್ನು ಗೌರವಿಸುತ್ತಿಲ್ಲ ಮತ್ತು ನ್ಯಾಯಾಲಯದ ಆದೇಶಕ್ಕಾಗಿ ಏಕೆ ಕಾಯುತ್ತಿಲ್ಲ? ಎಂದು ದೆಹಲಿ ಸಚಿವೆ ಅತಿಶಿ ಆರೋಪಿಸಿದ್ದಾರೆ.

SCROLL FOR NEXT