ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ 
ದೇಶ

ಹಿಮಾಚಲ ಪ್ರದೇಶ ಕಾಂಗ್ರೆಸ್ ಶಾಸಕರ ಅನರ್ಹತೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

Lingaraj Badiger

ನವದೆಹಲಿ: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಿದ್ದ ಹಿಮಾಚಲ ಪ್ರದೇಶದ ಆರು ಕಾಂಗ್ರೆಸ್ ಶಾಸಕರ ಅನರ್ಹತೆಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಕಾಂಗ್ರೆಸ್ ನ ಆರು ಶಾಸಕರನ್ನು ಅನರ್ಹಗೊಳಿಸಿದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಆದರೆ ಅನರ್ಹತೆಗೆ ತಡೆ ನೀಡಲು ನಾವು ಹೋಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ, ಅನರ್ಹಗೊಂಡ ಆರು ಶಾಸಕರಿಗೆ ಮತ ಚಲಾಯಿಸಲು ಅಥವಾ ಸದನದ ಕಲಾಪಗಳಲ್ಲಿ ಭಾಗವಹಿಸಲು ಅನುಮತಿ ನಿರಾಕರಿಸಿದೆ.

ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ ಎರಡನೇ ವಾರಕ್ಕೆ ಮುಂದೂಡಿದೆ.

ಸಾರ್ವತ್ರಿಕ ಚುನಾವಣೆಯ ದಿನಾಂಕ ಪ್ರಕಟವಾಗಿದ್ದು, ಮೇ ತಿಂಗಳಲ್ಲಿ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕವನ್ನು ತಿಳಿಸಲಾಗಿದೆ ಎಂಬ ಅಂಶವನ್ನು ಸಹ ನ್ಯಾಯಾಲಯದ ಗಮನಕ್ಕೆ ತರಲಾಗಿದೆ.

ಫೆಬ್ರವರಿ 29 ರಂದು ಸ್ಪೀಕರ್ ಕುಲದೀಪ್ ಸಿಂಗ್ ಪಠನಿಯಾ ಅವರು, ಆರು ಕಾಂಗ್ರೆಸ್ ಶಾಸಕರಾದ ಸುಧೀರ್ ಶರ್ಮಾ, ರಾಜಿಂದರ್ ರಾಣಾ, ದೇವಿಂದರ್ ಕೆ ಭುಟ್ಟೋ, ರವಿ ಠಾಕೂರ್, ಚೈತನ್ಯ ಶರ್ಮಾ ಮತ್ತು ಇಂದರ್ ದತ್ ಲಖನ್‌ಪಾಲ್ ಅವರನ್ನು ಪಕ್ಷಾಂತರ ತಡೆ ಕಾನೂನಿನ ಅಡಿಯಲ್ಲಿ ಅನರ್ಹಗೊಳಿಸಿದ್ದರು.

SCROLL FOR NEXT