ರಾಜ್ ಠಾಕ್ರೆ - ಅಮಿತ್ ಶಾ
ರಾಜ್ ಠಾಕ್ರೆ - ಅಮಿತ್ ಶಾ 
ದೇಶ

ರಾಜ್ ಠಾಕ್ರೆಯಿಂದ ಅಮಿತ್ ಶಾ ಭೇಟಿ; ಉದ್ಧವ್‌ಗೆ ಠಕ್ಕರ್ ಕೊಡಲು ಬಿಜೆಪಿ - ಎಂಎನ್‌ಎಸ್ ಮೈತ್ರಿ ಸಾಧ್ಯತೆ

Lingaraj Badiger

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್) ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ)ಕ್ಕೆ ಸೇರುವ ಬಗ್ಗೆ ರಾಜಕೀಯ ವಲಯಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.

ಮಹತ್ವದ ಬೆಳವಣಿಗೆಯೊಂದರಲ್ಲಿ, MNS ಮುಖ್ಯಸ್ಥ ರಾಜ್ ಠಾಕ್ರೆ ಮತ್ತು ಅವರ ಮಗ ಅಮಿತ್ ಠಾಕ್ರೆ ಅವರು ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.

ಸೋಮವಾರ ದೆಹಲಿಗೆ ಆಗಮಿಸಿದ ರಾಜ್ ಠಾಕ್ರೆ ಅವರು ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರೊಂದಿಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂಕ್ಷಿಪ್ತವಾಗಿ ಮಾತನಾಡಿದ ರಾಜ್ ಠಾಕ್ರೆ, "ನನಗೆ ಯಾವುದೇ ಕಲ್ಪನೆ ಇಲ್ಲ ... ನನಗೆ ಬರಲು ಮಾತ್ರ ಹೇಳಲಾಗಿದೆ ... ನನಗೆ ಯಾವುದೇ ಸಭೆಗಳ ಬಗ್ಗೆ ಮಾಹಿತಿ ಇಲ್ಲ" ಎಂದು ಹೇಳಿದರು.

ಎಂಎನ್‌ಎಸ್ ಮುಖ್ಯ ವಕ್ತಾರ ಸಂದೀಪ್ ದೇಶಪಾಂಡೆ ಅವರು ಈ ಬೆಳವಣಿಗೆಗಳನ್ನು ದೃಢಪಡಿಸಿದ್ದು, "ರಾಜ್ ಠಾಕ್ರೆ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಪಕ್ಷ ಮತ್ತು ರಾಜ್ಯದ ಹಿತಾಸಕ್ತಿಯಿಂದ ಇರುತ್ತದೆ" ಎಂದು ಹೇಳಿದ್ದಾರೆ.

ಎಂಎನ್ಎಸ್ - ಬಿಜೆಪಿ ಮೈತ್ರಿಗೆ ಗ್ರೀನ್ ಸಿಗ್ನಲ್ ಸಿಕ್ಕರೆ ಅವರ ಸೋದರ ಸಂಬಂಧಿ ಉದ್ಧವ್ ಠಾಕ್ರೆ ನಾಯಕತ್ವದ ಶಿವಸೇನಾ ಬಣದಿಂದ ಎದುರಾಗಿರುವ ಸವಾಲನ್ನು ಹತ್ತಿಕ್ಕಲು, ಮಹಾರಾಷ್ಟ್ರ ರಾಜಧಾನಿ ಮುಂಬೈನಿಂದ ಸ್ಪರ್ಧಿಸಲು ಎಂಎನ್‌ಎಸ್‌ಗೆ ಒಂದು ಸ್ಥಾನ ನೀಡಬಹುದು. ಆದರೆ ಬಿಜೆಪಿಯಿಂದ ಮೂರು ಸೀಟುಗಳಿಗೆ ಎಂಎನ್‌ಎಸ್ ಬೇಡಿಕೆ ಇರಿಸಿದ್ದು, ದಕ್ಷಿಣ ಮುಂಬಯಿ, ಶಿರಡಿ ಹಾಗೂ ನಾಸಿಕ್ ಕ್ಷೇತ್ರಗಳನ್ನು ತನಗೆ ನೀಡುವಂತೆ ಕೇಳಿದೆ ಎನ್ನಲಾಗಿದೆ.

SCROLL FOR NEXT