ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್  
ದೇಶ

EDಯಿಂದ ಬಂಧನ: ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

Sumana Upadhyaya

ನವದೆಹಲಿ: ಜಾರಿ ನಿರ್ದೇಶನಾಲಯದಿಂದ ತನ್ನ ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (AAP) ಸಂಚಾಲಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹಿಂಪಡೆದಿದ್ದಾರೆ.

ವಿಚಾರಣಾ ನ್ಯಾಯಾಲಯದ ಮುಂದೆ ರಿಮಾಂಡ್ ಪ್ರಕ್ರಿಯೆಗಳನ್ನು ಎದುರಿಸಿ ನಂತರ ಮತ್ತೊಂದು ಅರ್ಜಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸುವುದಾಗಿ ಕೇಜ್ರಿವಾಲ್ ಪರ ವಕೀಲರು ತಿಳಿಸಿದ್ದಾರೆ.

ಕೇಜ್ರಿವಾಲ್ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು. ಇಂದು ಅಪರಾಹ್ನ ವಿಚಾರಣಾ ನ್ಯಾಯಾಲಯದ ಮುಂದೆ ರಿಮಾಂಡ್ ಪ್ರಕ್ರಿಯೆ ಅದರ ತೀರ್ಪು ನೋಡಿಕೊಂಡು ಮುಂದೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿದರು.

ದೆಹಲಿ ಸರ್ಕಾರದ ಅಬಕಾರಿ ನೀತಿ 2021-22ಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ನಿನ್ನೆ ರಾತ್ರಿ ಇಡಿ ಬಂಧಿಸಿದೆ. ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ಈಗ ರದ್ದುಗೊಳಿಸಲಾಗಿದೆ.

ನೀವು ವಿಚಾರಣಾ ನ್ಯಾಯಾಲಯದ ಮುಂದೆ ಹೋಗಬಹುದು. ರಿಜಿಸ್ಟ್ರಿಗೆ ಇ-ಮೇಲ್ ಬರೆಯಿರಿ. ಆಮೇಲೆ ನೋಡೋಣ ಎಂದು ನ್ಯಾಯಮೂರ್ತಿ ಖನ್ನಾ ಕೇಜ್ರಿವಾಲ್ ಪರ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ಅಭಿಷೇಕ್ ಸಿಂಘ್ವಿ ಅವರಿಗೆ ಹೇಳಿದರು.

ಕೇಜ್ರಿವಾಲ್ ಅವರ ಬಂಧನದ ವಿರುದ್ಧದ ಅರ್ಜಿಯನ್ನು ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠವು ಇಂದು ಅಪರಾಹ್ನ ವಿಚಾರಣೆ ನಡೆಸಲಿದೆ ಎಂದು ನ್ಯಾಯಮೂರ್ತಿ ಖನ್ನಾ ಅವರು ಹಿರಿಯ ವಕೀಲ ಸಿಂಘ್ವಿ ಅವರಿಗೆ ಹೇಳಿದ ನಂತರ ಈ ನಿರ್ಧಾರ ಕೈಗೊಂಡರು. ಕೇಜ್ರಿವಾಲ್ ಅವರ ಪರ ವಕೀಲರು ನಿನ್ನೆ ತಡರಾತ್ರಿ ಸುಪ್ರೀಂ ಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

SCROLL FOR NEXT