ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ 
ದೇಶ

ಬಂಧನದ ವಿರುದ್ಧ ಕೇಜ್ರಿವಾಲ್ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು 3 ವಾರ ಸಮಯ ಕೋರಿದ ಇಡಿ; ವಿಳಂಬ ತಂತ್ರ ಎಂದ ಸಿಂಘ್ವಿ

Lingaraj Badiger

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಸಮಯ ನೀಡುವಂತೆ ಜಾರಿ ನಿರ್ದೇಶನಾಲಯ ಬುಧವಾರ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದೆ.

ಇಡಿ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ಈ ಅರ್ಜಿಯನ್ನು ಮಂಗಳವಾರವಷ್ಟೇ ಸಲ್ಲಿಸಲಾಗಿದ್ದು, ತಮ್ಮ ನಿಲುವು ದಾಖಲಿಸಲು ಮೂರು ವಾರಗಳ ಕಾಲಾವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಅಲ್ಲದೆ ಮಧ್ಯಂತರ ಪರಿಹಾರಕ್ಕೂ ಸ್ಪಂದಿಸಲು ಸೂಕ್ತ ಕಾಲಾವಕಾಶ ನೀಡಬೇಕು ಎಂದು ಹೇಳಿದ್ದಾರೆ.

ಎಎಪಿ ನಾಯಕನ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಪ್ರತಿಕ್ರಿಯೆ ಸಲ್ಲಿಸಲು ಸಮಯ ಕೋರಿರುವುದು ವಿಳಂಬ ತಂತ್ರದ ಭಾಗ ಎಂದು ಆರೋಪಿಸಿದರು.

ದೆಹಲಿ ಸಿಎಂ ಬಂಧನಕ್ಕೆ ಸೂಕ್ತ ಆಧಾರ ಇಲ್ಲ ಮತ್ತು ಅದರಲ್ಲಿ ಹಲವಾರು "ಪ್ರಜ್ವಲಿಸುವ ಸಮಸ್ಯೆಗಳು" ಇವೆ. ಹೀಗಾಗಿ ಹೈಕೋರ್ಟ್‌ನಿಂದ ತಕ್ಷಣದ ನಿರ್ಧಾರದ ಅಗತ್ಯವಿದೆ ಎಂದು ಹಿರಿಯ ವಕೀಲ ಸಿಂಘ್ವಿ ಹೇಳಿದರು.

ಸ್ವಲ್ಪ ಸಮಯದ ನಂತರ ಈ ವಿಷಯವನ್ನು ಮತ್ತೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷದ(ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಬಂಧನ ಮತ್ತು ನಂತರದ ಇಡಿ ಕಸ್ಟಡಿಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಅವರನ್ನು ಮಾರ್ಚ್ 21 ರಂದು ಬಂಧಿಸಲಾಯಿತು ಮತ್ತು ನಂತರ ದೆಹಲಿ ನ್ಯಾಯಾಲಯ ಮಾರ್ಚ್ 28 ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿದೆ.

SCROLL FOR NEXT