ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್ 
ದೇಶ

ಅರವಿಂದ ಕೇಜ್ರಿವಾಲ್ ಬಂಧನ: ಮಧ್ಯಂತರ ಆದೇಶಕ್ಕೆ ದೆಹಲಿ ಹೈಕೋರ್ಟ್‌ ನಕಾರ, ಏಪ್ರಿಲ್ 3ಕ್ಕೆ ಮುಂದಿನ ವಿಚಾರಣೆ

Ramyashree GN

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವ ವಿಚಾರದಲ್ಲಿ ಮಧ್ಯಂತರ ಆದೇಶ ನೀಡಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ.

ತಮ್ಮ ಬಂಧನ ಮತ್ತು ನಂತರ ಇ.ಡಿ ಕಸ್ಟಡಿಗೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಅವರ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ನೋಟಿಸ್ ಜಾರಿ ಮಾಡಿದರು ಮತ್ತು ಏಪ್ರಿಲ್ 2ಕ್ಕೂ ಮುನ್ನ ತಮ್ಮನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ತನಿಖಾ ಸಂಸ್ಥೆಗೆ ಸೂಚಿಸಿದರು.

ಏಪ್ರಿಲ್ 3 ರಂದು ಅಂತಿಮ ವಿಚಾರಣೆಗೆ ಪ್ರಕರಣವನ್ನು ತೆಗೆದುಕೊಳ್ಳಲಾಗುವುದು ಮತ್ತು ಅಂದೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ವಿಚಾರಣೆಯನ್ನು ಮುಂದೂಡುವುದಿಲ್ಲ ಎಂದು ನ್ಯಾಯಾಧೀಶರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಬಂಧನ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮುಖ್ಯ ರಿಟ್ ಅರ್ಜಿ ಮತ್ತು ಮಧ್ಯಂತರ ಪರಿಹಾರದ ಅರ್ಜಿ ಎರಡಕ್ಕೂ ಸಂಬಂಧಿಸಿದಂತೆ ನೋಟಿಸ್ ನೀಡುವುದು ಸೂಕ್ತವೆಂದು ನ್ಯಾಯಾಲಯ ಹೇಳಿದ್ದು, ಏಪ್ರಿಲ್ 2 ರೊಳಗೆ ಜಾರಿ ನಿರ್ದೇಶನಾಲಯವು ಪ್ರತಿಕ್ರಿಯೆಗಳನ್ನು ಸಲ್ಲಿಸಬೇಕು. ಹೆಚ್ಚುವರಿಯಾಗಿ, ಈ ಪ್ರತಿಕ್ರಿಯೆಗಳ ಪ್ರತಿಗಳನ್ನು ಡಿಜಿಟಲೈಸ್ ಮಾಡಿದ ರೂಪದಲ್ಲಿ ಮತ್ತು ಹಾರ್ಡ್ ಕಾಪಿಯನ್ನು ಅರ್ಜಿದಾರರ ವಕೀಲರಿಗೆ ಸಲ್ಲಿಸಬೇಕೆಂದು ನ್ಯಾಯಾಲಯವು ಸೂಚನೆ ನೀಡಿದೆ.

ಮಾರ್ಚ್ 21 ರಂದು ಬಂಧಿಸಲ್ಪಟ್ಟ ಕೇಜ್ರಿವಾಲ್ ಅವರನ್ನು ದೆಹಲಿ ನ್ಯಾಯಾಲಯವು ಮಾರ್ಚ್ 28 ರವರೆಗೆ ಇ.ಡಿ ಕಸ್ಟಡಿಗೆ ಒಪ್ಪಿಸಿದೆ. ತಮ್ಮ ಬಂಧನವು ಕಾನೂನುಬಾಹಿರವಾಗಿದ್ದು, ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಕೋರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಚುನಾವಣೆಯ ಹೊಸ್ತಿಲಲ್ಲಿ ಹಾಲಿ ಮುಖ್ಯಮಂತ್ರಿಯನ್ನು ಬಂಧಿಸಿರುವುದು ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿದೆ ಎಂದಿದ್ದಾರೆ.

ಬಂಧನದ ಹಿಂದಿರುವ ಉದ್ದೇಶವು ಅಪರಾಧವನ್ನು ಪತ್ತೆಹಚ್ಚುವುದಲ್ಲ. ಬದಲಿಗೆ, ನನ್ನನ್ನು ಮತ್ತು ತಮ್ಮ ಪಕ್ಷವನ್ನು ನಿಷ್ಕ್ರಿಯಗೊಳಿಸುವುದಾಗಿದೆ. ತಮ್ಮನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕೇಜ್ರಿವಾಲ್ ಮನವಿ ಮಾಡಿದ್ದಾರೆ.

ಇ.ಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ಮಂಗಳವಾರವಷ್ಟೇ ‘ಬೃಹತ್’ ಅರ್ಜಿಯನ್ನು ಸಲ್ಲಿಸಲಾಗಿದೆ. ಹೀಗಾಗಿ, ದಾಖಲೆಗಳ ಸಹಿತ ಅರ್ಜಿಗೆ ಪ್ರತಿಕ್ರಿಯಿಸಲು ಮೂರು ವಾರಗಳ ಕಾಲಾವಕಾಶ ನೀಡಬೇಕು ಎಂದು ಪೀಠವನ್ನು ಕೋರಿದರು.

ಅಲ್ಲದೆ, ಮಧ್ಯಂತರ ಪರಿಹಾರಕ್ಕೂ ಸ್ಪಂದಿಸಲು ಸೂಕ್ತ ಕಾಲಾವಕಾಶ ನೀಡಬೇಕು ಎಂದರು.

SCROLL FOR NEXT