ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ 60ಕ್ಕೂ ಹೆಚ್ಚು ಶಾಲೆಗಳು ಹಾಗೂ ಪಶ್ಚಿಮ ಬಂಗಾಳದ ರಾಜಭವನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದೆ.
ಪಶ್ಚಿಮ ಬಂಗಾಳದ ರಾಜಭವನ ಸ್ಫೋಟಿಸುವುದಾಗಿ ಕಿಡಿಗೇಡಿಗಳು ಕರೆ ಮಾಡಿದ್ದು, ನಾವು ಟೆರರೂಸರ್ಸ್ ಎಂಬ ಭಯೋತ್ಪಾದಕ ಗುಂಪಿಗೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ.
ರಾಜಭವನ ಕಟ್ಟಡದ ಒಳಗೆ ಸ್ಫೋಟಕ ಸಾಮಗ್ರಿ ಇರಿಸಿದ್ದೇವೆ. ಅಲ್ಲಿರುವ ಅನೇಕರು ಸಾಯುತ್ತಾರೆ ಎಂದು ಬೆದರಿಕೆ ಹಾಕಿದ್ದಾರೆ. ಆದರೆ, ಪಶ್ಚಿಮ ಬಂಗಾಳ ಪೊಲೀಸರು ಇದೊಂದು ಹುಸಿ ಕರೆ ಎಂದಿದ್ದಾರೆ. ಕರೆ ಮಾಡಿದವರ ಬಗ್ಗೆ ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ನಡುವೆ ಪೂರ್ವ ದೆಹಲಿಯ ಮಯೂರ ವಿಹಾರದಲ್ಲಿರುವ ಮದರ್ ಮೇರಿ ಶಾಲೆ ಸೇರಿ 60ಕ್ಕೂ ಹೆಚ್ಚು ಶಾಲೆಗಳಿಗೆ ಬುಧವಾರ ಬೆಳಿಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಘಟನೆ ಬಗ್ಗೆ ತನಿಖೆ ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
60ಕ್ಕೂ ಹೆಚ್ಚು ಶಾಲೆಗಳಿಗೆ ಬೆದರಿಕೆ ಕರೆ ಬಂದಿದೆ ಎಂದು ಅಗ್ನಿಶಾಮಕ ಸೇವೆಗಳ ನಿರ್ದೇಶಕ ಅತುಲ್ ಗರ್ಗ್ ಖಚಿತಪಡಿಸಿದ್ದಾರೆ.
ದೆಹಲಿ ಪೊಲೀಸರ ವಿಶೇಷ ಘಟಕವನ್ನು ಹಲವಾರು ಶಾಲೆಗಳಿಗೆ ಕಳುಹಿಸಲಾಗಿದ್ದು, ಪರಿಶೀಲೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.
ಡಿಸಿಪಿ ದೇವೇಶ್ ಕುಮಾರ್ ಮಹ್ಲಾ ಅವರು ಮಾತನಾಡಿ, ಎಲ್ಲಾ ಶಾಲೆಗಳನ್ನು ಪರಿಶೀಲಿಸಲಾಗಿದೆ. ಎಲ್ಲಿಯೂ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಲೆಫ್ಟಿನೆಂಟ್ ಸಕ್ಸೇನಾ ಅವರು, ಘಟನೆ ಸಂಬಂದ ವರದಿ ಸಲ್ಲಿಸುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಪೊಲೀಸ್ ಆಯಕ್ತರೊಂದಿಗೆ ಮಾತನಾಡಿದ್ದೇನೆ. ದೆಹಲಿ-ಎನ್‌ಸಿಆರ್‌ನಲ್ಲಿನ ಶಾಲೆಗಳಿಗೆ ಬಾಂಬ್ ಬೆದರಿಕೆಗಳ ಕುರಿತು ವಿವರವಾದ ವರದಿಯನ್ನು ಕೇಳಲಾಗಿದೆ. ಶಾಲಾ ಆವರಣದಲ್ಲಿ ಸಂಪೂರ್ಣ ಶೋಧವನ್ನು ಕೈಗೊಳ್ಳಲು, ಅಪರಾಧಿಗಳನ್ನು ಗುರುತಿಸಲು ಮತ್ತು ಯಾವುದೇ ಲೋಪವಾಗದಂತೆ ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡವಾಗಿದೆ. ಭಯಭೀಕರಾಗದಂತೆ ಹಾಗೂ ಶಾಲೆ-ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸುವ ಆಡಳಿತದೊಂದಿಗೆ ಸಹಕರಿಸುವಂತೆ ಪೋಷಕರಿಗೆ ಮನವಿ ಮಾಡಿಕೊಳ್ಳುತ್ತೇನೆ. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಕೆ ಸಕ್ಸೇನಾ ಹೇಳಿದ್ದಾರೆ.
ಭಯಪಡುವ ಅಗತ್ಯವಿಲ್ಲ: ಕೇಂದ್ರ ಗೃಹ ಸಚಿವಾಲಯ
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವಾಲಯ, ಇದೊಂದು ಹುಸಿ ಕರೆಯಾಗಿದ್ದು, ಭಯಪಡುವ ಅಗತ್ಯವಿಲ್ಲ. ದೆಹಲಿ ಪೊಲೀಸರು ಹಾಗೂ ಭದ್ರತಾ ಪಡೆಗಳು ನಿಯಮಗಳ ಪ್ರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಹೇಳಿದೆ.