ಮುಂಬೈ: ಬಿರುಗಾಳಿ, ಮಳೆಗೆ ಕಬ್ಬಿಣದ ಹೋರ್ಡಿಂಗ್ ವೊಂದು ಪೆಟ್ರೋಲ್ ಪಂಪ್ ಮೇಲೆ ಕುಸಿದು ಬಿದ್ದ ಪರಿಣಾಮ 9 ಜನರು ಸಾವನ್ನಪ್ಪಿದ್ದು, 70 ಜನರು ಗಾಯಗೊಂಡಿರುವ ಘಟನೆ ವಾಣಿಜ್ಯ ನಗರಿಯ ಘಾಟ್ಕೋಪರ್ ಪ್ರದೇಶದಲ್ಲಿ ಸೋಮವಾರ ನಡೆದಿದೆ.
ಪಾಂತ್ನಾಗರ್ ನ ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯ ಪೊಲೀಸ್ ಗ್ರೌಂಡ್ ಪೆಟ್ರೋಲ್ ಪಂಪ್‌ನಲ್ಲಿ ಈ ಘಟನೆ ನಡೆದಿದೆ. ಕೂಡಲೇ ಮುಂಬೈ ಅಗ್ನಿಶಾಮಕ ದಳ ಮತ್ತು ಇತರ ಏಜೆನ್ಸಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಗಾಯಗೊಂಡ ಏಳು ಜನರನ್ನು ರಾಜವಾಡಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕುಸಿದು ಬಿದ್ದ ಬೃಹತ್ ಜಾಹೀರಾತು ಫಲಕದ ಅವಶೇಷಗಳ ಅಡಿಯಲ್ಲಿ ಹತ್ತಾರು ಜನರು ಸಿಲುಕಿರುವ ಆತಂಕವಿದ್ದು, ಹುಡುಕಾಟ ಮತ್ತು ರಕ್ಷಣೆ ಪ್ರಕ್ರಿಯೆಯಲ್ಲಿದೆ ಎಂದು ಬಿಎಂಸಿ ಹೇಳಿದೆ.
ಇಲ್ಲಿಯವರೆಗೆ 67 ಜನರನ್ನು ರಕ್ಷಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ತಿಳಿಸಿದೆ. ಎನ್‌ಡಿಆರ್‌ಎಫ್ ತಂಡ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ. ಛೇಡಾ ನಗರ ಜಿಮ್ಖಾನಾ ಬಳಿ ಸಂಜೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಆಯುಕ್ತ ಭೂಷಣ್ ಗಗ್ರಾನಿ ತಿಳಿಸಿದ್ದಾರೆ.ರಕ್ಷಣಾ ಕಾರ್ಯಾಚರಣೆಗಾಗಿ ಕ್ರೇನ್‌ಗಳು ಮತ್ತು ಗ್ಯಾಸ್ ಕಟರ್ ಗಳನ್ನು ಕೂಡ ಸ್ಥಳಕ್ಕೆ ರವಾನಿಸಲಾಗಿದೆ. ಗಾಯಾಳುಗಳನ್ನು ರಾಜವಾಡಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.