ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ (Delhi excise policy case)ಕ್ಕೆ ಮಹತ್ವದ ಟ್ವಿಸ್ಟ್ ನೀಡಿರುವ ಜಾರಿ ನಿರ್ದೇಶನಾಲಯ (Enforcement Directorate) ಇದೀಗ ತಾನು ಸಲ್ಲಿಸಿರುವ 8ನೇ ಆರೋಪ ಪಟ್ಟಿ(chargesheet)ಯಲ್ಲಿ ಇಡೀ ಆಮ್ ಆದ್ಮಿ ಪಕ್ಷ (Aam Aadmi Party)ವನ್ನೇ ಆರೋಪಿಯನ್ನಾಗಿಸಿದೆ.
ಹೌದು.. ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ (Delhi Excise Policy Case) ಜೈಲು ಪಾಲಾಗಿ, ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಜಾರಿ ನಿರ್ದೇಶನಾಲಯವು ರೋಸ್ ಅವೆನ್ಯೂ ಕೋರ್ಟ್‌ಗೆ ಇಂದು ಪೂರಕ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅಬಕಾರಿ ನೀತಿ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಹಾಗೂ ಇಡೀ ಆಮ್ ಆದ್ಮಿ ಪಕ್ಷವನ್ನು ಆರೋಪಿಗಳು ಎಂದು ಪ್ರಸ್ತಾಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 8ನೇ ಚಾರ್ಜ್‌ಶೀಟ್ ಸಲ್ಲಿಸಿರುವ ಇ.ಡಿ, “ಮದ್ಯ ಮಾರಾಟಗಾರರರಿಗೆ ಅನುಕೂಲವಾಗಲಿ ಎಂಬ ದಿಸೆಯಲ್ಲಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿ ಹಲವು ನಾಯಕರು ನೀತಿ ರೂಪಿಸಿದ್ದಾರೆ. ದಕ್ಷಿಣ ಭಾರತದ ಹಲವು ವ್ಯಕ್ತಿಗಳು ಇದರ ಲಾಭ ಪಡೆದಿದ್ದಾರೆ. ಲಾಭದ ಸ್ವಲ್ಪ ಮೊತ್ತವನ್ನು ಆಪ್‌ಗೆ ನೀಡಲಾಗಿದೆ. ಆ ಮೊತ್ತವನ್ನು ಗೋವಾ ಚುನಾವಣೆಗೆ ಬಳಸಲಾಗಿದೆ” ಎಂದು ಇ.ಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
ಮತ್ತೆ ಕೇಜ್ರಿವಾಲ್ ಗೆ ಸಂಕಷ್ಟ
ಅರವಿಂದ್ ಕೇಜ್ರಿವಾಲ್ ಹಾಗೂ ಆಪ್‌ಅನ್ನು ಆರೋಪಿಗಳನ್ನಾಗಿ ಚಾರ್ಜ್‌ಶೀಟ್‌ನಲ್ಲಿ ಪ್ರಸ್ತಾಪಿಸಿದ ಕಾರಣ ಮುಂದಿನ ದಿನಗಳಲ್ಲಿ ಕೇಜ್ರಿವಾಲ್ ಅವರಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಇ.ಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತೀರ್ಪನ್ನು ಕಾಯ್ದಿರಿಸಿದೆ.
ಇನ್ನು ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪ್ರಧಾನ ಆರೋಪಿಯಾಗಿರುವ ಈ ಅಬಕಾರಿ ಹಗರಣದಲ್ಲಿ ಈ ವರೆಗೂ ಒಟ್ಟು 18 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಇತ್ತೀಚೆಗಷ್ಟೇ ಅರವಿಂದ್ ಕೇಜ್ರಿವಾಲ್ ಜಾಮಿನಿನ ಮೇಲೆ ಬಿಡುಗಡೆಯಾಗಿದ್ದರು. ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇನ್ನು ವಿಚಾರಣಾಧೀನ ಕೈದಿಯಾಗಿದ್ದಾರೆ.