ಬೆಂಗಳೂರು: ವೀಕೆಂಡ್ ಮಸ್ತಿಗೆ ಖ್ಯಾತ ಪ್ರವಾಸಿ ಊಟಿಗೆ ಹೋಗುತ್ತಿದ್ದರೆ ಸ್ವಲ್ಪ ನಿಧಾನಿಸಿ.. ಏಕೆಂದರೆ ಅಲ್ಲಿನ ಹವಾಮಾನ ಪರಿಸ್ಥಿತಿ ಕುರಿತು ನೀಲಗಿರೀಸ್ ಜಿಲ್ಲಾಡಳಿತ ಪ್ರಮುಖ ಎಚ್ಚರಿಕೆ ನೀಡಿದೆ.
ಹೌದು.. ಊಟಿ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿ ಮೇ 18ರಿಂದ ಮೇ20 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ನೀಲಗಿರಿ ಜಿಲ್ಲಾಡಳಿತ ಶುಕ್ರವಾರ ತಿಳಿಸಿದೆ. ಈ ಅವಧಿಯಲ್ಲಿ ಪ್ರವಾಸಿಗರು ಭೇಟಿ ನೀಡುವುದನ್ನು ತಪ್ಪಿಸುವಂತೆ ಜನರನ್ನು ಕೇಳಿದೆ.
ಭಾರತೀಯ ಹವಾಮಾನ ಇಲಾಖೆಯು "ಆರೆಂಜ್ ಅಲರ್ಟ್" ಮುನ್ಸೂಚನೆಯನ್ನು ನೀಡಿದ್ದು, ಅಂದರೆ ಮೇ 18, 19 ಮತ್ತು 20 ರಂದು 6 ಸೆಂ-20 ಸೆಂಟಿಮೀಟರ್‌ಗಳಷ್ಟು ಭಾರಿ ಮಳೆ ಬೀಳುವ ಸಾಧ್ಯತೆ ಎಂದು ಜಿಲ್ಲಾಧಿಕಾರಿ ಎಂ ಅರುಣಾ ತಿಳಿಸಿದ್ದಾರೆ.
ಅಂತೆಯೇ 'ಇಲ್ಲಿಗೆ ಬರುವವರು ಎಲ್ಲ ರೀತಿಯ ರಕ್ಷಣೆಯನ್ನು ಹೊಂದಿರಬೇಕು, ಸಾಧ್ಯವಾದರೆ ಈ ಅವಧಿಯಲ್ಲಿ ಇಲ್ಲಿಗೆ ಪ್ರಯಾಣಿಸುವುದನ್ನು ತಪ್ಪಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಮಳೆ ಸಿದ್ಧತೆ ಕುರಿತು ಕಂದಾಯ, ಪೊಲೀಸ್ ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಎಂ ಅರುಣಾ ಅವರು ಅಧಿಕಾರಿಗಳಿಂದ ಸಂಬಂಧಿಸಿದ ಇಲಾಖೆಗಳು ಸನ್ನದ್ಧ ಸ್ಥಿತಿ ಕುರಿತು ಮಾಹಿತಿ ಪಡೆದರು.
ಈ ವೇಳೆ ಸುಮಾರು 3,500 ವಿಪತ್ತು ನಿರ್ವಹಣಾ ಸಿಬ್ಬಂದಿ ಮತ್ತು ಜೆಸಿಬಿ ಯಂತ್ರಗಳು ಸೇರಿದಂತೆ ಅಗತ್ಯ ಉಪಕರಣಗಳು ಸಿದ್ಧವಾಗಿವೆ. ಸುಮಾರು 450 ತಾತ್ಕಾಲಿಕ ಆಶ್ರಯ ಶಿಬಿರಗಳನ್ನು ಸಹ ಸಿದ್ಧಪಡಿಸಲಾಗಿದೆ. ಮಳೆ ವೇಳೆ ಜನರು ಮನೆಯೊಳಗೆ ಇರುವಂತೆ ಕೇಳಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.