ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡುವುದಕ್ಕಾಗಿ ಮಧ್ಯಂತರ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಸೋರೆನ್ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಕುರಿತು ಮೇ 20 ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯದ(ಇಡಿ)ಕ್ಕೆ ಶುಕ್ರವಾರ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಸೋರೆನ್ ಅವರ ಬಂಧನದ ವಿರುದ್ಧ ಸಲ್ಲಿಸಿದ ಮನವಿಗೆ ಸಂಕ್ಷಿಪ್ತ ಉತ್ತರವನ್ನು ಸಲ್ಲಿಸುವಂತೆ ಫೆಡರಲ್ ಏಜೆನ್ಸಿಯನ್ನು ಕೇಳಿದೆ ಮತ್ತು ಮೇ 21 ರಂದು ರಜಾ ಕಾಲದ ಪೀಠದ ಮುಂದೆ ವಿಷಯವನ್ನು ಪಟ್ಟಿ ಮಾಡಿದೆ.
ಮಧ್ಯಂತರ ಜಾಮೀನು ನೀಡಿದರೆ, ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ನಾಯಕ ಜೂನ್ 2 ರಂದು ಮತ್ತೆ ಶರಣಾಗಲಿದ್ದಾರೆ ಎಂದು ಸೋರೆನ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ತಿಳಿಸಿದ್ದಾರೆ.
ಪ್ರಕರಣದಲ್ಲಿ ತಮ್ಮ ಕಕ್ಷಿದಾರನ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ. ಹೀಗಾಗಿ ಮಧ್ಯಂತರ ಜಾಮೀನು ನೀಡಿ, ಇಲ್ಲದಿದ್ದರೆ ಚುನಾವಣೆ ಮುಗಿಯುತ್ತದೆ ಎಂದು ಸಿಬಲ್ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಇಡಿ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು, ಸೋರೆನ್ ಅವರನ್ನು ಬಹಳ ಹಿಂದೆಯೇ ಬಂಧಿಸಲಾಗಿದೆ ಮತ್ತು ಅವರ ಸಾಮಾನ್ಯ ಜಾಮೀನು ಅರ್ಜಿ ವಜಾಗೊಳಿಸಿರುವುದನ್ನೂ ಅವರು ಪ್ರಶ್ನಿಸಿಲ್ಲ ಎಂದಿದ್ದಾರೆ.