ಪುರುಲಿಯಾ/ಬಿಷ್ಣುಪುರ್: ರಾಮಕೃಷ್ಣ ಮಿಷನ್ ಮತ್ತು ಭಾರತ್ ಸೇವಾಶ್ರಮ ಸಂಘದ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಖಂಡಿಸಿದ್ದಾರೆ. ಟಿಎಂಸಿಯ ಮತ ಬ್ಯಾಂಕ್ ನ್ನು ಸಮಾಧಾನಪಡಿಸಲು ಈ ಸಾಮಾಜಿಕ-ಧಾರ್ಮಿಕ ಸಂಘಟನೆಗಳ ವಿರುದ್ಧ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪುರುಲಿಯಾದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಟಿಎಂಸಿ ತುಂಬಾ ಕೆಳಮಟ್ಟಕ್ಕಿಳಿಯುವ ಮೂಲಕ ಸಭ್ಯತೆಯ ಮಿತಿಯನ್ನು ದಾಟಿದೆ. ಅದು "ಇಸ್ಕಾನ್, ರಾಮಕೃಷ್ಣ ಮಿಷನ್ ಮತ್ತು ಭಾರತ್ ಸೇವಾಶ್ರಮ ಸಂಘದ ವಿರುದ್ಧ ಅಪ ಪ್ರಚಾರ ಮಾಡುತ್ತಿದೆ. ‘‘ಚುನಾವಣೆ ಸಂದರ್ಭದಲ್ಲಿ ಬಂಗಾಳದ ಜನರನ್ನು ಬೆದರಿಸುವ ಮತ್ತು ಬೆದರಿಕೆ ಹಾಕಿರುವ ಟಿಎಂಸಿ ಈ ಬಾರಿ ಎಲ್ಲ ಮಿತಿಗಳನ್ನು ಮೀರಿದೆ. ಇಂದು ದೇಶ ಮತ್ತು ವಿಶ್ವದಲ್ಲಿ ಇಸ್ಕಾನ್, ರಾಮಕೃಷ್ಣ ಮಿಷನ್ ಮತ್ತು ಭಾರತ್ ಸೇವಾಶ್ರಮ ಸಂಘ ಸೇವೆ ಮತ್ತು ನೈತಿಕತೆಗೆ ಹೆಸರಾಗಿದೆ. ಆದರೆ ಬಂಗಾಳದ ಮುಖ್ಯಮಂತ್ರಿ ಬಹಿರಂಗ ವೇದಿಕೆಯಿಂದ ಬೆದರಿಕೆ ಹಾಕುತ್ತಿದ್ದಾರೆ... ಕೇವಲ ತಮ್ಮ ವೋಟ್ ಬ್ಯಾಂಕ್ ಅನ್ನು ಸಮಾಧಾನಪಡಿಸಲು ಬೆದರಿಕೆ ಹಾಕುತ್ತಿದ್ದಾರೆ" ಎಂದು ಅವರು ಹೇಳಿದರು.
ಈ ಸಂಸ್ಥೆಗಳು ಜಗತ್ತಿನಾದ್ಯಂತ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದು, ಜನರಿಗೆ ಸೇವೆ ಸಲ್ಲಿಸುವುದು ಅವರ ಗುರಿಯಾಗಿದೆ. "ಬಂಗಾಳ ಸರ್ಕಾರ ಅವರತ್ತ ಬೆರಳು ತೋರಿಸಿದೆ. ಎಷ್ಟು ಧೈರ್ಯ! ಕೇವಲ ಅವರ ಮತ ಬ್ಯಾಂಕ್ ಅನ್ನು ಮೆಚ್ಚಿಸಲು?" ಎಂದು ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದರು. ಬಿಷ್ಣುಪುರದಲ್ಲಿ ಮತ್ತೊಂದು ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಬ್ಯಾನರ್ಜಿ ಅವರು "ಮುಸ್ಲಿಂ ಮೂಲಭೂತವಾದಿಗಳ ಒತ್ತಡಕ್ಕೆ ಒಳಗಾಗಿದ್ದು, ದೇಶದ ಸಂತರು ಮತ್ತು ಸನ್ಯಾಸಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.