ನಲ್ಗೊಂಡ: ಲಾರಿಯೊಂದು ಪೆಟ್ರೋಲ್ ಬಂಕ್ ಗೆ ಬರುತ್ತಲೇ ಬೆಂಕಿ ಹೊತ್ತಿದ್ದು, ಬಂಕ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತವೊಂದು ತಪ್ಪಿದೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು, ಭೊಂಗೀರ್ ಪೊಲೀಸ್ ಠಾಣಾ ವ್ಯಾಪ್ತಿಯ ನಯರಾ ಪೆಟ್ರೋಲ್ ಬಂಕ್ ನಲ್ಲಿ ಈ ಘಟನೆ ನಡೆದಿದೆ.
ಪೆಟ್ರೋಲ್ ಬಂಕ್‌ಗೆ (Petrol Bunk) ಸರಕು ಸಾಗಾಣಿಕಾ ಲಾರಿಯೊಂದು ಡೀಸೆಲ್ ತುಂಬಿಸಿಕೊಳ್ಳಲು ಬರುತ್ತಿದ್ದಂತೆ ಲಾರಿಯಲ್ಲಿ(Lorry) ಬೆಂಕಿ ಕಾಣಿಸಿಕೊಂಡಿದೆ. ಲಾರಿ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದ್ದು, ಇದರಿಂದ ಕೆಲಕ್ಷಣಗಳ ಕಾಲ ವಿಚಲಿತಗೊಂಡ ಬಂಕ್ ಸಿಬ್ಬಂದಿ ಕೂಡಲೇ ಎಚ್ಚೆತ್ತು ಬಂಕ್ ನಲ್ಲಿದ್ದ ಬೆಂಕಿ ನಂದಿಸುವ ಯಂತ್ರಗಳಿಂದ ಬೆಂಕಿ ನಂದಿಸಿದ್ದಾರೆ. ಆ ಮೂಲಕ ಆಗಬಹುದಾಗಿದ್ದ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ.
ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದ್ದು, ಇವಿಷ್ಟೂ ಘಟನೆ ಬಂಕ್ ನಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದೆ. ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬಂಕ್‌ನಲ್ಲಿದ್ದ ಸಾರ್ವಜನಿಕರು ತಮ್ಮ ವಾಹನಗಳನ್ನು ತೆಗೆದುಕೊಂಡು ದೂರ ಓಡಿದ್ದಾರೆ. ಆದರೆ ಅಲ್ಲೇ ಇದ್ದ ಪೆಟ್ರೋಲ್ ಬಂಕ್ ಸಿಬ್ಬಂದಿ ಅಗ್ನಿ ಶಾಮಕದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಕ್ ಸಿಬ್ಬಂದಿಗಳ ಕಾರ್ಯ ಇದೀಗ ಎಲ್ಲೆಡೆ ಮೆಚ್ಚುಗೆಗೆ ಕಾರಣವಾಗಿದೆ.