ನವದೆಹಲಿ: ಕಳೆದ ಮೇ 20 ರಂದು ನಡೆದ ಲೋಕಸಭೆ ಚುನಾವಣೆಯ ಐದನೇ ಹಂತದಲ್ಲಿ ಒಟ್ಟು ಶೇ. 62.2 ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಗುರುವಾರ ತಿಳಿಸಿದೆ.
ಚುನಾವಣಾ ಆಯೋಗದ ಪ್ರಕಟಣೆಯ ಪ್ರಕಾರ, ಐದನೇ ಹಂತದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ. 63 ರಷ್ಟು ಮಹಿಳಾ ಮತದಾರರು ಹಾಗೂ ಶೇ. 61.48 ರಷ್ಟು ಪುರುಷ ಮತದಾರರು ಮತದಾನ ಕೇಂದ್ರಗಳಿಗೆ ಬಂದಿದ್ದಾರೆ.
ಐದನೇ ಹಂತದಲ್ಲಿ, ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 49 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಈ ಹಂತದಲ್ಲಿ 4.69 ಕೋಟಿ ಪುರುಷರು, 4.26 ಕೋಟಿ ಮಹಿಳೆಯರು ಮತ್ತು 5409 ತೃತೀಯಲಿಂಗಿಗಳು ಸೇರಿದಂತೆ ಒಟ್ಟು 8.95 ಕೋಟಿ ಜನ ಮತದಾನಕ್ಕೆ ಅರ್ಹರಾಗಿದ್ದರು.
ಬಿಹಾರ, ಜಾರ್ಖಂಡ್, ಲಡಾಖ್, ಒಡಿಶಾ ಮತ್ತು ಉತ್ತರ ಪ್ರದೇಶದ ಪುರುಷರಿಗೆ ಹೋಲಿಸಿದರೆ ಮತದಾನದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಪುರುಷ-ಮಹಿಳೆಯರ ಮತದಾನದ ಅಂತರ ಹೆಚ್ಚಿತ್ತು. ಬಿಹಾರದಲ್ಲಿ ಪುರುಷರ ಮತದಾನದ ಪ್ರಮಾಣ ಶೇ.52.42 ಆಗಿದ್ದರೆ, ಮಹಿಳೆಯರ ಮತದಾನದ ಪ್ರಮಾಣ ಶೇ.61.58 ಆಗಿದೆ. ಅದೇ ರೀತಿ, ಜಾರ್ಖಂಡ್‌ನಲ್ಲಿ ಪುರುಷರ ಮತದಾನವು ಶೇ 58.08 ರಷ್ಟಿದ್ದರೆ, ಮಹಿಳೆಯರ ಮತದಾನವು ಶೇ 68.65 ರಷ್ಟಿದೆ.
ಒಡಿಶಾದ ಕಂಧಮಾಲ್ ಲೋಕಸಭಾ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಮರುಮತದಾನ ಗುರುವಾರ ಮುಕ್ತಾಯವಾಗಲಿದೆ ಮತ್ತು ಮರುಮತದಾನದ ನಂತರ ಮತದಾನ ಪ್ರಮಾಣದ ಅಂಕಿಅಂಶಗಳು ಬದಲಾಗಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.