ನವದೆಹಲಿ: ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ಮಧ್ಯಂತರ ಜಾಮೀನಿನ ಅವಧಿಯನ್ನು ಏಳು ದಿನಗಳವರೆಗೆ ವಿಸ್ತರಿಸುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದೆ.
ಅರ್ಜಿಯನ್ನು ನಿರಾಕರಿಸಿರುವ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್, ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯಕ್ಕೆ ತೆರಳಲು ಕೇಜ್ರಿವಾಲ್ ಅವರಿಗೆ ಸ್ವಾತಂತ್ಯ್ರ ನೀಡಿರುವುದರಿಂದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಮಂಗಳವಾರ ಸಿಎಂ ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಮಂಡಿಸಿದ ಮನವಿ ಆಲಿಸಿದ ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ರಜಾಕಾಲದ ಪೀಠ, ಈ ವಿಚಾರದಲ್ಲಿ ತೀರ್ಪನ್ನು ಕಾಯ್ದಿರಿಸಿರುವುದರಿಂದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಪ್ರಕರಣಗಳ ಪಟ್ಟಿಗೆ ಸೇರಿಸುವ ತೀರ್ಮಾನವನ್ನು ಸಿಜೆಐ ತೆಗೆದುಕೊಳ್ಳಬಹುದು ಎಂದು ಹೇಳಿತು.
ಹಠಾತ್ ತೂಕದಲ್ಲಿ ಏರಿಳಿತ ಮತ್ತೂ ಮೂತ್ರಪಿಂಡದ ಗಂಭೀರತೆ ಸೂಚಿಸುವ ಕೆಲವೊಂದು ಲಕ್ಷಣಗಳಿಂದಾಗಿ ಪಿಇಟಿ- ಸಿ ಸ್ಕ್ಯಾನ್ ಸೇರಿದಂತೆ ಕೆಲವೊಂದು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ತಮ್ಮ ಮಧ್ಯಂತರ ಜಾಮೀನನ್ನು ಏಳು ದಿನಗಳವರೆಗೆ ವಿಸ್ತರಿಸುವಂತೆ ಕೇಜ್ರಿವಾಲ್ ಕೋರಿದ್ದಾರೆ. ಜೂನ್ 2 ರ ಬದಲಿಗೆ ಜೂನ್ 9 ರಂದು ಜೈಲಿನ ಅಧಿಕಾರಿಗಳ ಮುಂದೆ ಶರಣಾಗುವುದಾಗಿ ಮೇ 26 ರಂದು ಸಲ್ಲಿಸಿರುವ ಹೊಸ ಅರ್ಜಿಯಲ್ಲಿ ದೆಹಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.