ಲಖನೌ: ಬಜಾಜ್ ಫೈನಾನ್ಸ್ ನಲ್ಲಿ ವ್ಯವಸ್ಥಾಪಕರಾಗಿದ್ದ 42 ವರ್ಷದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತರುಣ್ ಸಕ್ಸೇನಾ ಮೃತಪಟ್ಟ ವ್ಯಕ್ತಿಯಾಗಿದ್ದು, ಉತ್ತರ ಪ್ರದೇಶದ ಝಾನ್ಸಿಯಲ್ಲಿ ಸಾವನ್ನಪ್ಪಿದ್ದು, ಇದಕ್ಕೆ ಕೆಲಸದ ಒತ್ತಡವೇ ಕಾರಣ ಎಂದು ಹೇಳಲಾಗುತ್ತಿದೆ.
ಸಕ್ಸೇನಾ ಅವರು ತಮ್ಮ ಪತ್ನಿ ಮೇಘಾ ಅವರನ್ನು ಉದ್ದೇಶಿಸಿ ಐದು ಪುಟಗಳ ಪತ್ರವನ್ನು ಬರೆದಿದ್ದು ಅವಾಸ್ತವಿಕ ಗುರಿಗಳನ್ನು ಸಾಧಿಸಲು ತನ್ನ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ತಮ್ಮ ಹಿರಿಯ ಅಧಿಕಾರಿಗಳ ಪಟ್ಟುಬಿಡದ ಬೇಡಿಕೆಗಳ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಎನ್ ಡಿಟಿವಿ ಪ್ರಕಟಿಸಿರುವ ವರದಿಯ ಪ್ರಕಾರ, ಹಿರಿಯ ಮ್ಯಾನೇಜ್‌ಮೆಂಟ್‌ಗೆ ಕಳವಳ ವ್ಯಕ್ತಪಡಿಸಿದ ಹೊರತಾಗಿಯೂ, ಅವರು ಮತ್ತು ಅವರ ಸಹೋದ್ಯೋಗಿಗಳಿಗೆ, ಸಂಗ್ರಹವಾಗದ EMI ಗಳನ್ನು ಸರಿದೂಗಿಸಲು ಒತ್ತಾಯಿಸುತ್ತಿದ್ದರು ಎಂದು ಸಕ್ಸೇನಾ ಬಹಿರಂಗಪಡಿಸಿದ್ದಾರೆ. ಅವರ ಪತ್ರವು ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ವಿವರಿಸಿದ್ದು, 45 ದಿನಗಳವರೆಗೆ ನಿದ್ರಾಹೀನತೆ ಅನುಭವಿಸಿದ್ದು, ಹಸಿವನ್ನು ಕಳೆದುಕೊಂಡಿದ್ದಾರೆ ಮತ್ತು ಆತಂಕ ಎದುರಿಸುತ್ತಿದ್ದರು ಎಂದು ಹೇಳಿದೆ. ಅವರು ಸಾಯುವ ದಿನದಂದೂ ಸಹ 6 AM ವೀಡಿಯೊ ಕಾನ್ಫರೆನ್ಸ್‌ನಲ್ಲಿ ತಾವು ಎದುರಿಸಿದ ಒತ್ತಡಗಳನ್ನು ವಿವರಿಸಿದ್ದರು. ಅಲ್ಲಿ ಅವರ ಮೇಲಧಿಕಾರಿಗಳು ಅವರನ್ನು ವಜಾಗೊಳಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ.
ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಪ್ರತ್ಯೇಕ ಕೊಠಡಿಯಲ್ಲಿ ಬೀಗ ಹಾಕಿ ತರುಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ರದಲ್ಲಿ ತಮ್ಮ ವಿಮಾ ಹಣವನ್ನು ಸ್ವೀಕರಿಸುವಂತೆ ಕುಟುಂಬದವರಿಗೆ ಹೇಳಿದ್ದು ಹಿರಿಯ ಮ್ಯಾನೇಜರ್‌ಗಳ ವಿರುದ್ಧ ಪೊಲೀಸ್ ದೂರು ದಾಖಲಿಸಲು ಅವರಿಗೆ ಸೂಚಿಸಿದ್ದಾರೆ.
ಈ ದುರಂತ ಘಟನೆ 26 ವರ್ಷದ ಚಾರ್ಟರ್ಡ್ ಅಕೌಂಟೆಂಟ್ ಅನ್ನಾ ಸೆಬಾಸ್ಟಿಯನ್ ಪೆರೈಲ್ ಅವರ ಇತ್ತೀಚಿನ ಸಾವಿನ ಬೆನ್ನಲ್ಲೇ ವರದಿಯಾಗಿದೆ. ಇದು ಒತ್ತಡದ ಕೆಲಸದ ಪರಿಸರದ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಯನ್ನು ಹುಟ್ಟುಹಾಕಿದೆ. ಅನ್ನಾ ಅವರ ತಾಯಿ ಅನಿತಾ ಆಗಸ್ಟಿನ್ EY ಇಂಡಿಯಾ ಅಧ್ಯಕ್ಷ ರಾಜೀವ್ ಮೆಮಾನಿ ಅವರಿಗೆ ಬಹಿರಂಗ ಪತ್ರ ಬರೆದು ಸಂಸ್ಥೆಯ ಸಂಸ್ಕೃತಿಯನ್ನು ಟೀಕಿಸಿದ್ದರು. ಉದ್ಯೋಗಿಗಳ ಯೋಗಕ್ಷೇಮವನ್ನು ನಿರ್ಲಕ್ಷಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದರು.