ಕೋಲ್ಕತ್ತಾ: ವೈದ್ಯಕೀಯ ಸಂಸ್ಥೆಗಳಲ್ಲಿ ತಮ್ಮ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಮೇಲೆ ರಾಜ್ಯ ಸರ್ಕಾರವನ್ನು ಇನ್ನಷ್ಟು ಒತ್ತಾಯಿಸಲು ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ಧರಣಿ ನಿರತ ಕಿರಿಯ ವೈದ್ಯರು ಇಂದು ಮಂಗಳವಾರ ಕೆಲಸಕ್ಕೆ ಬಹಿಷ್ಕಾರ ಹಾಕಿ ತಮ್ಮ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಕಳೆದ ಆಗಸ್ಟ್ 9ರಂದು ಕೋಲ್ಕತ್ತಾದ ಆರ್ ಜಿ ಕಾರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ 42 ದಿನಗಳ ಪ್ರತಿಭಟನೆಯ ನಂತರ ಕಿರಿಯ ವೈದ್ಯರು ಸೆಪ್ಟೆಂಬರ್ 21 ರಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಭಾಗಶಃ ತಮ್ಮ ಕರ್ತವ್ಯಕ್ಕೆ ಮರಳಿದ್ದರು.
ಸುರಕ್ಷತೆ ಮತ್ತು ಭದ್ರತೆಗಾಗಿ ತಮ್ಮ ಬೇಡಿಕೆಗಳನ್ನು ಈಡೇರುವ ಯಾವುದೇ ಸಕಾರಾತ್ಮಕ ಮಾರ್ಗಗಳು ಸರ್ಕಾರದಿಂದ ನಮಗೆ ಕಾಣುತ್ತಿಲ್ಲ. ಇಂದು ಪ್ರತಿಭಟನೆಯ 52 ನೇ ದಿನವಾಗಿದೆ ನಮ್ಮ ಜೀವಕ್ಕೆ ಇನ್ನೂ ಭದ್ರತೆ ಸಿಕ್ಕಿಲ್ಲ. ನಮಗೆ ಸರ್ಕಾರ ನೀಡಿದ್ದ ಭರವಸೆಗಳನ್ನು ಉಳಿಸಿಕೊಳ್ಳಲು ಯಾವುದೇ ಪ್ರಯತ್ನಗಳು ಆಗುತ್ತಿಲ್ಲ. ಹೀಗಿರುವಾಗ ಕರ್ತವ್ಯ ನಿಲ್ಲಿಸಿ ಮತ್ತೆ ಮುಷ್ಕರ ನಡೆಸುವುದು ಬಿಟ್ಟರೆ ನಮಗೆ ಅನ್ಯಮಾರ್ಗವಿಲ್ಲ ಎಂದು ಕಿರಿಯ ವೈದ್ಯರಲ್ಲಿ ಒಬ್ಬರಾದ ಅನಿಕೇತ್ ಮಹತೋ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.
ನಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರದಿಂದ ಸ್ಪಷ್ಟ ಸಕಾರಾತ್ಮಕ ಸ್ಪಂದರೆ ಸಿಗದಿದ್ದರೆ ನಮ್ಮ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಯುತ್ತದೆ ಎಂದರು.