ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಬಣದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಶಾಸಕ ಹಾಗೂ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರು ಶುಕ್ರವಾರ ಮಹಾರಾಷ್ಟ್ರದ ಮಂತ್ರಾಲಯ(ಸಚಿವಾಲಯ)ದ ಛಾವಣಿಯಿಂದ ಜಿಗಿದಿದ್ದು, ಕೆಳಗೆ ಸುರಕ್ಷತಾ ನೆಟ್ ಅಳವಡಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಂಬೈನಲ್ಲಿರುವ ಮಹಾರಾಷ್ಟ್ರ ಸರ್ಕಾರದ ಆಡಳಿತ ಕೇಂದ್ರವಾದ ಮಂತ್ರಾಲಯದ ಮೂರನೇ ಮಹಡಿಯಿಂದ ನರಹರಿ ಜಿರ್ವಾಲ್ ಅವರು ಜಿಗಿದಿದ್ದಾರೆ ಎನ್ನಲಾಗಿದೆ.
ಮೂರನೇ ಮಹಡಿಯಿಂದ ಜಿಗಿದ ಬಳಿಕ ನೆಟ್ನಲ್ಲಿ ಸಿಲುಕಿದ್ದ ಜಿರ್ವಾಲ್ ಅವರನ್ನು ಹೊರಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಇನ್ನೂ ಕೆಲವರು ನೆಟ್‌ಗೆ ಹಾರಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅವರಲ್ಲಿ ಬುಡಕಟ್ಟು ಶಾಸಕರೂ ಇದ್ದರು. ಎಲ್ಲ ಶಾಸಕರು ನೆಟ್‌ನಲ್ಲಿಯೇ ನಿಂತು ಘೋಷಣೆಗಳನ್ನು ಕೂಗಲು ಆರಂಭಿಸಿದರು.
ಧಂಗರ್ ಸಮುದಾಯವನ್ನು ಎಸ್ಸಿಗೆ ಸೇರಿಸಬೇಕು ಎಂದು ಒತ್ತಾಯಿಸುತ್ತಿರುವ ನರಹರಿ ಜಿರ್ವಾಲ್ ಅವರು ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಲು ಬಂದಿದ್ದರು. ಆದರೆ ಅವರ ಭೇಟಿ ಸಾಧ್ಯವಾಗಲಿಲ್ಲ. ಇದಾದ ಬಳಿಕ ಶುಕ್ರವಾರವೂ ಸಿಎಂ ಭೇಟಿಗೆ ತೆರಳಿದ್ದು, ಸಿಎಂ ಸಿಗಲಿಲ್ಲ. ಇದರಿಂದ ಕೋಪಗೊಂಡು ತೀವ್ರ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದೆ.
ಛಾವಣಿಯಿಂದ ಕೆಳಗೆ ಜಿಗಿದ ನಂತರ ನೆಟ್ ನಲ್ಲಿ ಸಿಲುಕಿದ್ದ ಮಹಾರಾಷ್ಟ್ರದ ಡೆಪ್ಯೂಟಿ ಸ್ಪೀಕರ್ ನರಹರಿ ಜಿರ್ವಾಲ್ ಅವರನ್ನು ಪೊಲೀಸರು ರಕ್ಷಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಒಬಿಸಿ ವರ್ಗದ ಅಡಿಯಲ್ಲಿ ಮೀಸಲಾತಿ ಹೊಂದಿರುವ ಮಹಾರಾಷ್ಟ್ರದ ಧಂಗರ್ ಸಮುದಾಯವು ಪರಿಶಿಷ್ಟ ಪಂಗಡದ ಮೀಸಲಾತಿಗೆ ಒತ್ತಾಯಿಸಿ ಆಂದೋಲನ ನಡೆಸುತ್ತಿದೆ.