ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಶಾಲಾ ಶಿಕ್ಷಕಿಯೊಬ್ಬರ ಅಶ್ಲೀಲ ವೀಡಿಯೋ ಹರಿಬಿಟ್ಟು ಬ್ಲಾಕ್ ಮೇಲ್ ಮಾಡಿದ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಗ್ರಾದ ನಿವಾಸಿಯಾಗಿರುವ ಶಿಕ್ಷಕಿ ಮಥುರಾದ ಶಾಲೆಯೊಂದರಲ್ಲಿ ಪಾಠ ಮಾಡುತ್ತಿದ್ದರು. ಅವರು ಆಗ್ರಾದಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಟ್ಯೂಷನ್ ಮಾಡುತ್ತಿದ್ದರು. ಕ್ರಮೇಣ ಟ್ಯೂಷನ್ ನಲ್ಲಿನ ಓರ್ವ ವಿದ್ಯಾರ್ಥಿ ಶಿಕ್ಷಕಿಯೊಂದಿಗೆ ಸ್ನೇಹ ಸಂಬಂಧ ಬೆಳೆಸಿದ್ದ.
ಬಳಿಕ ಆಕೆಯೊಂದಿಗೆ ತನ್ನ ಮೊಬೈಲ್ ನಲ್ಲಿ ಶಿಕ್ಷಕಿಯ ಅಶ್ಲೀಲ ವೀಡಿಯೊವನ್ನು ರಿಕಾರ್ಡ್ ಮಾಡಿಕೊಂಡಿದ್ದು, ಅಲ್ಲದೆ ಅದನ್ನು ತೋರಿಸಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಬ್ಲಾಕ್ ಮೇಲ್ ಮಾಡಿದ್ದಾನೆ.
ಆತನ ವೇದನೆ ಅತಿಯಾದಾಗ ಶಿಕ್ಷಕಿ ಆತನಿಂದ ದೂರಾಗಿದ್ದು, ಈ ವೇಳೆ ವಿದ್ಯಾರ್ಥಿ ತನ್ನ ಹಳ್ಳಿಯಲ್ಲಿರುವ ತನ್ನ ಮೂವರು ಸ್ನೇಹಿತರೊಂದಿಗೆ ಆ ಅಶ್ಲೀಲ ವೀಡಿಯೊವನ್ನು ಹಂಚಿಕೊಂಡಿದ್ದಾನೆ.
ಬಳಿಕ ಆ ವಿಡಿಯೋ ಒಬ್ಬರಿಂದ ಒಬ್ಬರಿಗೆ ವಾಟ್ಸಪ್ ನಲ್ಲಿ ಹರಿದಾಡಿದ್ದು, ಅಲ್ಲದೆ ಇನ್ ಸ್ಟಾಗ್ರಾಮ್ ಖಾತೆ ತೆರೆದು ಅಲ್ಲಿಯೂ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಚಾರ ತಿಳಿದು ಮಿಷನ್ ಶಕ್ತಿ ಅಭಿಯಾನ ಕೇಂದ್ರಕ್ಕೆ ತೆರಳಿದ ಸಂತ್ರಸ್ಥ ಶಿಕ್ಷಕಿ, ಅವಮಾನದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿರುವುದಾಗಿ ತಿಳಿಸಿದ್ದಾರೆ.
ಬಳಿಕ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.