ಚೆನ್ನೈ: ಚೆನ್ನೈನ ಮರೀನಾ ಬೀಚ್‌ನಲ್ಲಿ ಆಯೋಜಿಸಿದ್ದ ಭಾರತೀಯ ವಾಯುಸೇನೆಯ ವೈಮಾನಿಕ ಪ್ರದರ್ಶನದ ವೇಳೆ ಅತಿಯಾದ ಬಿಸಿಲಿನ ತಾಪದಿಂದ ಐವರು ಸಾವನ್ನಪ್ಪಿದ್ದಾರೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಸೋಮವಾರ ಖಚಿತಪಡಿಸಿದ್ದಾರೆ.
ಏರ್ ಶೋ ವೇಳೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಹೆಚ್ಚಿನ ಬಿಸಿಲಿನ ಝಳದಿಂದ ಮೃತಪಟ್ಟಿದ್ದಾರೆ. ಒಟ್ಟು 102 ಜನರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದು, ಆರಂಭದಲ್ಲಿ 93 ಜನರು ಆಸ್ಪತ್ರೆಗೆ ದಾಖಲಾಗಿದ್ದರು.
ಈ ಪೈಕಿ ಓಮಂದೂರಾರ್ ಜನರಲ್ ಆಸ್ಪತ್ರೆಯಲ್ಲಿ ಇಬ್ಬರು, ರಾಯಾಪೇಟ್ ಜನರಲ್ ಆಸ್ಪತ್ರೆಯಲ್ಲಿ ಇಬ್ಬರು ಮತ್ತು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಒಬ್ಬರು ಸೇರಿದಂತೆ ಒಟ್ಟು ಐವರು ಸಾವನ್ನಪ್ಪಿದ್ದಾರೆ ಎಂದು ಸುಬ್ರಮಣಿಯನ್ ಸುದ್ದಿಗಾರರಿಗೆ ತಿಳಿಸಿದರು.
ಅದೃಷ್ಟವಶಾತ್, ಪರಿಸ್ಥಿತಿ ಸುಧಾರಿಸಿದ್ದು, ಸದ್ಯ ಕೇವಲ 7 ಮಂದಿ ಒಳರೋಗಿಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ ಸಚಿವರು, ಏರ್ ಶೋ ಪ್ರದರ್ಶನಕ್ಕೆ ತೆರಳುವ ಮುನ್ನ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿತ್ತು. ಛತ್ರಿ ಮತ್ತು ನೀರಿನ ಬಾಟಲಿಯೊಂದಿಗೆ ಪ್ರದರ್ಶನ ವೀಕ್ಷಿಸಲು ಬರುವಂತೆ ಭಾರತೀಯ ವಾಯುಪಡೆ ಕೂಡಾ ತಿಳಿಸಿತ್ತು ಎಂದು ಹೇಳಿದರು.
ಘಟನೆಗೂ ಮುನ್ನಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದ ಸುಬ್ರಮಣಿಯನ್ , IAF ಬೇಡಿಕೆಯಂತೆ ರಾಜ್ಯ ಸರ್ಕಾರವು ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ. ಏರ್ ಶೋ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ತಮಿಳುನಾಡು ಸರ್ಕಾರ ಸಂಪೂರ್ಣ ಆಡಳಿತಾತ್ಮಕ ಸಹಕಾರ ನೀಡಲಿದೆ. ಕಾರ್ಯಕ್ರಮವನ್ನು ಸರಿಯಾಗಿ ಯೋಜಿಸಲು ಮತ್ತು ನಡೆಸಲು, ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಭಾರತೀಯ ವಾಯುಪಡೆ ಅಧಿಕಾರಿಗಳು ಮತ್ತು ತಮಿಳುನಾಡು ಸರ್ಕಾರದೊಂದಿಗೆ ಸಮನ್ವಯ ಸಭೆ ನಡೆಸಲಾಗಿದೆ ಎಂದು ಹೇಳಿದ್ದರು.