ನವದೆಹಲಿ: ಎಡಪಂಥೀಯ-ಉಗ್ರಗಾಮಿಗಳ(ಎಲ್‌ಡಬ್ಲ್ಯೂಇ) ವಿರುದ್ಧದ ಹೋರಾಟವು ಅಂತಿಮ ಹಂತದಲ್ಲಿದೆ ಮತ್ತು ಮಾರ್ಚ್ 2026ರ ವೇಳೆಗೆ ಎಡಪಂಥೀಯ-ಉಗ್ರವಾದವನ್ನು ಸಂಪೂರ್ಣ ನಿರ್ಮೂಲನೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಹೇಳಿದ್ದಾರೆ.
ಇಂದು ನಕ್ಸಲ್ ಪೀಡಿತ ರಾಜ್ಯಗಳ ಎಂಟು ಮುಖ್ಯಮಂತ್ರಿಗಳೊಂದಿಗೆ ನಡೆದ ಭದ್ರತೆ ಮತ್ತು ಅಭಿವೃದ್ಧಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅಮಿತ್ ಶಾ, ಅಭಿವೃದ್ಧಿಯು ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಕೊನೆಯ ವ್ಯಕ್ತಿಯನ್ನು ತಲುಪಬೇಕಾದರೆ, ಎಡ ಸಿದ್ಧಾಂತ ಪ್ರೇರಿತ ಹಿಂಸಾಚಾರವನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು ಎಂದರು.
LWE ವಿರುದ್ಧ ಹೋರಾಡಲು, ನಕ್ಸಲ್ ಪೀಡಿತ ಪ್ರದೇಶಗಳಲ್ಲೂ ಕಾನೂನನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು. ಕಳೆದ 30 ವರ್ಷಗಳಲ್ಲಿ ಮೊದಲ ಬಾರಿಗೆ, ಎಡ ಸಿದ್ಧಾಂತ ಬೆಂಬಲಿತ ಉಗ್ರವಾದದಿಂದಾಗಿ ಮೃತಪಟ್ಟವರ ಸಂಖ್ಯೆ 100ಕ್ಕಿಂತ ಕಡಿಮೆಯಾಗಿದೆ ಎಂದು ಶಾ ಹೇಳಿದರು.
LWE ಹಿಂಸಾಚಾರದ ವಿರುದ್ಧದ ಹೋರಾಟವು ಈಗ ಅಂತಿಮ ಹಂತದಲ್ಲಿದೆ. ಮಾರ್ಚ್ 2026 ರ ವೇಳೆಗೆ, ದೇಶವು “ದಶಕಗಳ ಈ ಹಳೆಯ ಸಮಸ್ಯೆಯಿಂದ ಸ್ವಾತಂತ್ರ್ಯವನ್ನು ಪಡೆಯುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.
ಶೇಕಡಾ 80 ರಷ್ಟು LWEಯ ಕೇಡರ್ ಸಾಮರ್ಥ್ಯವು ಈಗ ಛತ್ತೀಸ್‌ಗಢಕ್ಕೆ ಮಾತ್ರ ಸೀಮಿತವಾಗಿದೆ. ಛತ್ತೀಸ್‌ಗಢದಲ್ಲಿ ಜನವರಿಯಿಂದ ಇಲ್ಲಿಯವರೆಗೆ 194 ಉಗ್ರರು ಹತರಾಗಿದ್ದಾರೆ. ಅವರಲ್ಲಿ 801 ಮಂದಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ ಮತ್ತು 742 ಮಂದಿ ಶರಣಾಗಿದ್ದಾರೆ.
ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರುವಂತೆ ನಕ್ಸಲ್ ಕಾರ್ಯಕರ್ತರಿಗೆ ಅಮಿತ್ ಶಾ ಮನವಿ ಮಾಡಿದರು.
ನಾವು ನಕ್ಸ್ ಪೀಡಿತ ರಾಜ್ಯಗಳಲ್ಲಿ ರಾಜ್ಯ ಪೊಲೀಸ್ ಸಂಸ್ಥೆಗಳೊಂದಿಗೆ ಜಂಟಿ ಕಾರ್ಯಪಡೆಗಳನ್ನು ರಚಿಸಿದ್ದೇವೆ. ಇಂದು ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ 12 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಇದರಲ್ಲಿ ಆರು ಬಿಎಸ್‌ಎಫ್ ಮತ್ತು ಆರು ವಾಯುಪಡೆ ಸೇರಿವೆ ಎಂದರು.