ಚಂಡೀಗಢ: ಹಲವು ಅಚ್ಚರಿ ಮತ್ತು ತಿರುವುಗಳನ್ನು ಕಂಡ ಹರ್ಯಾಣ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಒಲಿಂಪಿಕ್ ಸ್ಪರ್ಧಿ, ಮಾಜಿ ಕುಸ್ತಿಪಟು ಜುಲಾನಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಜಯ ಗಳಿಸಿದ್ದಾರೆ.
ವಿನೇಶ್ ಫೋಗಟ್ ಅವರು ಜುಲಾನಾ ಕ್ಷೇತ್ರದಲ್ಲಿ ತಮ್ಮ ಎದುರಾಳಿ ಸ್ಪರ್ಧಿ ಬಿಜೆಪಿ ಅಭ್ಯರ್ಥಿ ಯೋಗೀಶ್ ಬೈರಾಗಿ ವಿರುದ್ಧ 6 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಒಲಿಂಪಿಕ್ಸ್‌ನಿಂದ ರಾಜಕೀಯಕ್ಕೆ ವಿನೇಶ್ ಜಿಗಿತ
2024 ರ ವರ್ಷವು ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್‌ಗೆ ರೋಲರ್ ಕೋಸ್ಟರ್ ಎಂದು ಸಾಬೀತಾಯಿತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲವಾದ ನಂತರ, ಫೋಗಟ್ ರಾಜಕೀಯಕ್ಕೆ ಕಾಲಿಟ್ಟರು. ಜಿಂದ್ ಜಿಲ್ಲೆಯ ಜುಲಾನಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ವಿನೇಶ್ ಅವರ ಎದುರಾಳಿ, ಯೋಗೇಶ್ ಬೈರಾಗಿ ಒಂಬತ್ತು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದರು. ಹರಿಯಾಣ ಬಿಜೆಪಿ ಯುವ ಘಟಕದ ಅಧ್ಯಕ್ಷರಾಗಿದ್ದಾರೆ.
ಕುಸ್ತಿಪಟು ವಿನೇಶ್ ಫೋಗಟ್ ಅವರು 2024 ರ ಒಲಿಂಪಿಕ್ಸ್‌ನಲ್ಲಿ 150 ಗ್ರಾಂ ಅಧಿಕ ತೂಕದ ಕಾರಣಕ್ಕಾಗಿ ಮಹಿಳೆಯರ 50-ಕಿಲೋಗ್ರಾಂ ಫ್ರೀಸ್ಟೈಲ್ ಕುಸ್ತಿ ವಿಭಾಗದಿಂದ ಅನರ್ಹರಾಗಿದ್ದರು. ಇದು ಅವರಿಗೆ ಕಹಿ ಆಘಾತವನ್ನುಂಟು ಮಾಡಿತ್ತು, ಒಲಿಂಪಿಕ್ಸ್ ಪದಕ ಗೆಲ್ಲುವ ಕನಸನ್ನು ನುಚ್ಚುನೂರು ಮಾಡಿತ್ತು. ನಂತರ ವಿನೇಶ್ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರು.
ನಾನು ಹೊಸ ಇನ್ನಿಂಗ್ಸ್ ಪ್ರಾರಂಭಿಸುತ್ತಿದ್ದೇನೆ. ನಾನು ಎದುರಿಸಿದ ಅನುಭವವನ್ನು ಬೇರೆ ಕ್ರೀಡಾಪಟುಗಳು ಎದುರಿಸಬಾರದು ಎಂಬುದು ನನ್ನ ಆಸೆಯಾಗಿದೆ. ಕಳೆದ ವರ್ಷ, ಫೋಗಟ್ ಅವರು ಬಿಜೆಪಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸುದೀರ್ಘ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.