ಮೆಹ್ಸಾನಾ: ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಕಡಿ ತಾಲೂಕಿನ ಜಸಾಲ್‌ಪುರ ಗ್ರಾಮದ ಬಳಿ ಖಾಸಗಿ ನಿರ್ಮಾಣ ಸ್ಥಳದಲ್ಲಿ ಗೋಡೆ ಕುಸಿದು ಒಂಬತ್ತು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಅವಶೇಷಗಳ ಅಡಿಯಲ್ಲಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು ರಕ್ಷಣಾ ತಂಡವು ಒಂಬತ್ತು ಮೃತದೇಹಗಳನ್ನು ಹೊರತೆಗೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ 1:45ರ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ಮೆಹ್ಸಾನಾ ಅವರ ಡಿಡಿಒ ಕಚೇರಿ ಖಚಿತಪಡಿಸಿದೆ.
ಮೆಹ್ಸಾನಾ ಜಿಲ್ಲಾ ಅಭಿವೃದ್ಧಿ ಅಧಿಕಾರಿ (ಡಿಡಿಒ) ಡಾ. ಹಸರತ್ ಜಾಸ್ಮಿನ್, ಇದು ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಖಾಸಗಿ ಕಂಪನಿಯಾಗಿದೆ. ಘಟನೆ ಮಧ್ಯಾಹ್ನ 1.45ರ ಸುಮಾರಿಗೆ ನಡೆದಿದೆ. ನಮ್ಮ ಮಾಹಿತಿ ಪ್ರಕಾರ, 9-10 ಜನರು ಸಿಕ್ಕಿಬಿದ್ದಿದ್ದರು. ಎಂದು ತಿಳಿಸಿದ್ದಾರೆ.
ಮೆಹ್ಸಾನಾ ಜಿಲ್ಲಾ ಕೇಂದ್ರದಿಂದ ಸುಮಾರು 37 ಕಿಲೋಮೀಟರ್ ದೂರದಲ್ಲಿರುವ ಕಾಡಿ ಪಟ್ಟಣದ ಬಳಿ ಈ ಘಟನೆ ನಡೆದಿದೆ. ಜಸಾಲ್‌ಪುರ ಗ್ರಾಮದಲ್ಲಿ ಕಾರ್ಖಾನೆಯೊಂದಕ್ಕೆ ಸಂಪ್ ನಿರ್ಮಿಸಲು ಹಲವಾರು ಕಾರ್ಮಿಕರು ಹೊಂಡವನ್ನು ಅಗೆಯುತ್ತಿದ್ದಾಗ ಸಡಿಲವಾದ ಮಣ್ಣು ಅವರ ಮೇಲೆ ಕುಸಿದಿದೆ ಎಂದು ಕಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಹ್ಲಾದ್ ಸಿಂಗ್ ವಘೇಲಾ ತಿಳಿಸಿದ್ದಾರೆ. ಘಟನೆಗೆ ಆಡಳಿತವು ತಕ್ಷಣವೇ ಸ್ಪಂದಿಸಿತ್ತು. ಆದರೆ ಮಣ್ಣಿನಲ್ಲಿ ಹೂತುಹೋದ ಹತ್ತು ಕಾರ್ಮಿಕರಲ್ಲಿ ಒಬ್ಬರು ಮಾತ್ರ ಬದುಕುಳಿದ್ದಾರೆ.
ಗೋಡೆ ಕುಸಿದು ಜನರು ಸಾವನ್ನಪ್ಪಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಗುಜರಾತಿನ ಮೆಹ್ಸಾನಾದಲ್ಲಿ ಗೋಡೆ ಕುಸಿತದಿಂದ ಸಂಭವಿಸಿದ ಅಪಘಾತವು ಅತ್ಯಂತ ದುಃಖಕರವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ, ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಲ್ಲಿ ತೊಡಗಿದೆ ಎಂದರು.