ಶ್ರೀನಗರ: 7 ಮಂದಿಯನ್ನು ಹತ್ಯೆಗೈದ ಉಗ್ರರ ಆಟಾಟೋಪ ಪ್ರಕರಣ ಹಸಿರಾಗಿರುವಂತೆಯೇ ಇತ್ತ ಬಾರಾಮುಲ್ಲಾದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಹೊಂದಿದ್ದ ಉಗ್ರನನ್ನುಸೋಮವಾರ ಭಾರತೀಯ ಸೇನೆ ಹೊಡೆದುರುಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದ್ದು, ಮದ್ದು–ಗುಂಡು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸೇನೆ, 'ಭಾರಿ ಶಸ್ತ್ರಾಸ್ತ್ರ ಹೊಂದಿದ್ದ ಒಬ್ಬ ಉಗ್ರನನ್ನು ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ. ಒಂದು ಎಕೆ ಸರಣಿಯ ರೈಫಲ್, ಎರಡು ಎಕೆ ಸರಣಿಯ ಮ್ಯಾಗಜಿನ್, 57 ಸುತ್ತು ಎಕೆ ಸರಣಿಯ ಗುಂಡು, 2 ಪಿಸ್ತೂಲ್‌ಗಳು, ಮೂರು ಪಿಸ್ತೂಲ್ ಮ್ಯಾಗಜಿನ್ ಸೇರಿದಂತೆ ಯುದ್ಧೋಪಾದಿಯಲ್ಲಿ ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚಿನಾರ್ ಕೋರ್ ಪ್ರಕಟಣೆಯಲ್ಲಿ ತಿಳಿಸಿದೆ.
ಅಂತೆಯೇ ಈ ಪ್ರದೇಶದಲ್ಲಿ ಒಳನುಸುಳುವಿಕೆ ತಡೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಉಗ್ರರ ಸಂಭಾವ್ಯ ಒಳನುಸುಳುವಿಕೆ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಒಳನುಸುಳುವಿಕೆ ತಡೆಗೆ ಜಂಟಿ ಕಾರ್ಯಾಚರಣೆಯನ್ನು ಉರಿ, ಬಾರಾಮುಲ್ಲಾ ಗಡಿಗಳಲ್ಲಿ ಆರಂಭಿಸಿದ್ದರು.
ಕಣ್ಗಾವಲು ಪಡೆಗಳು ಅನುಮಾನಾಸ್ಪದ ಚಟುವಟಿಕೆಯನ್ನು ಗುರುತಿಸಿದವು, ಕಾರ್ಯಾಚರಣೆಗೆ ಮುಂದಾದ ಸೇನೆ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ ಸೇನೆಯು ಪ್ರತಿದಾಳಿ ನಡೆಸಿದ್ದು, ಕಾರ್ಯಾಚರಣೆ ಮುಂದುವರಿದಿದೆ’ಎಂದು ಚಿನಾರ್ ಕೋರ್ ತಿಳಿಸಿದೆ.
ಈ ಮಧ್ಯೆ, ಭಾನುವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಗಾಂದರಬಲ್ ಜಿಲ್ಲೆಯ ಗಗಂಗೀರ್ ಪ್ರದೇಶದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ ಆರು ಕಾರ್ಮಿಕರು, ಒಬ್ಬ ವೈದ್ಯ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.