ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು ಶನಿವಾರ ಬಿಡುಗಡೆ ಮಾಡಿದೆ. ಪಕ್ಷವು ಇದುವರೆಗೆ 71 ಅಭ್ಯರ್ಥಿಗಳನ್ನು ಘೋಷಿಸಿದೆ.
ಎರಡನೇ ಪಟ್ಟಿಯಲ್ಲಿ ನಾಗ್ಪುರ ದಕ್ಷಿಣ ಕ್ಷೇತ್ರದಿಂದ ಕೃಷ್ಣರಾವ್ ಪಾಂಡವ್, ವಾರ್ಧಾದಿಂದ ಶೇಖರ್ ಪ್ರಮೋದಬಾಬು ಶೆಂಡೆ, ರಾಳೇಗಾಂವ್‌ನಿಂದ ಪ್ರೊ.ವಸಂತ್ ಚಿಂದೂಜಿ ಪುರ್ಕೆ ಮತ್ತು ಜಲ್ನಾದಿಂದ ಕೈಲಾಸ್ ಕಿಸನ್‌ರಾವ್ ಗೊರ್ತಂಟ್ಯಾಲ್ ಅವರನ್ನು ಪಕ್ಷವು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಪಕ್ಷವು ಕಾಂದಿವಲಿ ಪೂರ್ವದಿಂದ ಕಾಲು ಬಧೇಲಿಯಾ ಮತ್ತು ಚಾರ್ಕೋಪ್ ಕ್ಷೇತ್ರದಿಂದ ಯಶವಂತ್ ಜಯಪ್ರಕಾಶ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ.
ಪಕ್ಷವು 48 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿತ್ತು. ನಿನ್ನೆ ಸಂಜೆ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ (CECs) ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಯಿತು. ಈ ಮಧ್ಯೆ, ಇಂಡಿಯಾ ಬ್ಲಾಕ್ ಮಿತ್ರ ಪಕ್ಷ ಸಮಾಜವಾದಿ ಪಕ್ಷ (SP) ಸಹ ಐದು ಸ್ಥಾನಗಳಿಗೆ ಒತ್ತಾಯಿಸುತ್ತಿದೆ.
ಎಐಸಿಸಿ ಮಹಾರಾಷ್ಟ್ರ ಉಸ್ತುವಾರಿ ರಮೇಶ್ ಚೆನ್ನಿತ್ತಲ ಅವರು ಮೈತ್ರಿಕೂಟಗಳ ನಡುವೆ ಯಾವುದೇ ಬಿರುಕು ಇಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯು ಮಹಾರಾಷ್ಟ್ರದ ಉಳಿದ ಸ್ಥಾನಗಳ ಬಗ್ಗೆ ಚರ್ಚಿಸಿದೆ. ನಾಳೆ ಸಂಜೆಯ ವೇಳೆಗೆ ಪೂರ್ಣ ಪಟ್ಟಿ ಹೊರಬೀಳುತ್ತದೆ. ಎಂವಿಎ ಒಗ್ಗಟ್ಟಿನಿಂದ ಸ್ಪರ್ಧಿಸುತ್ತಿದೆ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.
ತನ್ನ ಮೊದಲ ಪಟ್ಟಿಯಲ್ಲಿ, ಪಕ್ಷವು ಹಲವಾರು ಹಾಲಿ ಶಾಸಕರನ್ನು ಉಳಿಸಿಕೊಂಡಿದೆ. ನಾನಾ ಪಟೋಲೆ ಮತ್ತು ಮಾಜಿ ಸಿಎಂ ಪೃಥ್ವಿರಾಜ್ ಚವಾಣ್ ಸೇರಿದಂತೆ ಹಿರಿಯ ನಾಯಕರನ್ನು ಕಣಕ್ಕಿಳಿಸಿದೆ. ಪಕ್ಷವು ನಾಗ್ಪುರ ಉತ್ತರ ಮತ್ತು ಸಂಗಮ್ನೇರ್‌ನಿಂದ ಮಾಜಿ ಸಚಿವರಾದ ನಿತಿನ್ ರಾವುತ್ ಮತ್ತು ಬಾಳಾಸಾಹೇಬ್ ಥೋರಟ್ ಅವರನ್ನು ಕಣಕ್ಕಿಳಿಸಿದೆ.