ನವದೆಹಲಿ: ಯುವಕನೊಬ್ಬ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ತನ್ನ ಹದಿಹರೆಯದ ಪ್ರೇಯಸಿಯನ್ನು ಹತ್ಯೆ ಮಾಡಿ, ಶವವನ್ನು ಹೂತುಹಾಕಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ಪಶ್ಚಿಮ ದೆಹಲಿಯ ನಂಗ್ಲೋಯಿ ನಿವಾಸಿಯಾಗಿರುವ ಹತ್ತೊಂಬತ್ತು ವರ್ಷದ ಸೋನಿ ಎಂಬ ಯುವತಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಅದಕ್ಕೆ ಕಾರಣನಾದ ತನ್ನ ಗೆಳೆಯ ಸಂಜು ಅಲಿಯಾಸ್ ಸಲೀಮ್ ಗೆ ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಆದರೆ ಮದುವೆಯಾಗಲು ನಿರಾಕರಿಸಿದ ಸಲೀಮ್, ಆಕೆಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೋನಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು ಮತ್ತು 6,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು. ತಮ್ಮ ಹಾಗೂ ಪ್ರಿಯಕರ ಸಲೀಮ್ ಎಂಬಾತನ ಹಲವು ಫೋಟೊ ಮತ್ತು ವಿಡಿಯೊಗಳನ್ನು ಹಂಚಿಕೊಂಡಿದ್ದರು. ಯುವತಿಯ ಫೋಟೊಗಳನ್ನು ಸಂಜು ಕೂಡಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಸೋನಿ ಏಳು ತಿಂಗಳ ಗರ್ಭಿಣಿಯಾಗಿದ್ದಳು ಹಾಗೂ ಮದುವೆಯಾಗುವಂತೆ ಸಂಜುವನ್ನು ಒತ್ತಾಯಿಸುತ್ತಿದ್ದಳು. ಆದರೆ ಇದಕ್ಕೆ ಒಪ್ಪದ ಸಂಜು ಗರ್ಭಪಾತಕ್ಕೆ ಒತ್ತಾಯಿಸುತ್ತಿದ್ದ. ಪದೇ ಪದೇ ಇಬ್ಬರೂ ಜಗಳವಾಡುತ್ತಿದ್ದರು. ಸೋಮವಾರ ಕೆಲ ವಸ್ತುಗಳೊಂದಿಗೆ ಆಕೆ ಸಂಜುವನ್ನು ಭೇಟಿ ಮಾಡುವ ಸಲುವಾಗಿ ಮನೆ ಬಿಟ್ಟು ಹೋಗಿದ್ದಳು.
ಸಂಜು ಹಾಗೂ ಇಬ್ಬರು ಸಹಚರರು ಆಕೆಯನ್ನು ಹರ್ಯಾಣದ ರೋಹ್ಟಕ್ ಗೆ ಕರೆದೊಯ್ದು ಹತ್ಯೆ ಮಾಡಿ ಹೂತು ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸಂಜು ಹಾಗೂ ಒಬ್ಬ ಸಹಚರನನ್ನು ಬಂಧಿಸಲಾಗಿದೆ.