ಚೆನ್ನೈ: ತಮಿಳು ನಟ ವಿಜಯ್ ದಳಪತಿ ಅವರ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೊದಲ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಇಬ್ಬರು ಪಕ್ಷದ ಕಾರ್ಯಕರ್ತರು ರಸ್ತೆ ಅಪಘಾತದಲ್ಲಿ ಭಾನುವಾರ ಮೃತಪಟ್ಟಿದ್ದಾರೆ.
ಕಲ್ಲಕುರಿಚಿ ಜಿಲ್ಲೆಯ ಉಲುಂದೂರ್‌ಪೇಟ್ ಬಳಿಯ ಶೇಕ್ ಹುಸೇನ್‌ಪೇಟ್‌ನಲ್ಲಿ ಎಸ್‌ಯುವಿ ಕಾರು ಪಲ್ಟಿಯಾದ ಪರಿಣಾಮ ಟಿವಿಕೆ ಪಕ್ಷದ ಇಬ್ಬರು ಕಾರ್ಯಕರ್ತರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಪಘಾತಕ್ಕೀಡಾದ ಕಾರಿನಲ್ಲಿದ್ದ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಉಳುಂದೂರುಪೇಟೆ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ತಿರುಚ್ಚಿಯ ಕಲೈ ಮತ್ತು ಶ್ರೀನಿವಾಸನ್ ಎಂದು ಗುರುತಿಸಲಾಗಿದೆ. ಅವರು TVK ಪಕ್ಷದ ಮೊದಲ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ವಿಕ್ರವಾಂಡಿಗೆ ತೆರಳುತ್ತಿದ್ದರು. ಕಾರು ಶೇಕ್ ಹುಸೇನ್‌ಪೇಟೆ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಕ್ರವಾಂಡಿಯಲ್ಲಿ 85 ಎಕರೆ ವಿಸ್ತೀರ್ಣದ ಸಮ್ಮೇಳನ ಸ್ಥಳವು ಚೆನ್ನೈನ ಐತಿಹಾಸಿಕ ಕೋಟೆ ಸೇಂಟ್ ಜಾರ್ಜ್ ಮಾದರಿಯ ಭವ್ಯವಾದ ಪ್ರವೇಶದ್ವಾರವನ್ನು ಹೊಂದಿದೆ. ಸುಮಾರು 2 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ಸಾಧ್ಯತೆಯಿದೆ. ಭದ್ರತೆಗಾಗಿ ಸುಮಾರು 6,000 ಪೊಲೀಸರನ್ನು ತಮಿಳುನಾಡು ಗೃಹ ಇಲಾಖೆ ನಿಯೋಜಿಸಿದೆ.
ವಿಚಾರವಾದಿ ದ್ರಾವಿಡ ಧೀಮಂತ 'ಪೆರಿಯಾರ್' ಇವಿ ರಾಮಸಾಮಿಯಿಂದ ಹಿಡಿದು ಡಾ ಬಿಆರ್ ಅಂಬೇಡ್ಕರ್ ಮತ್ತು ಕಾಂಗ್ರೆಸ್ ಹಿರಿಯ ಕೆ ಕಾಮರಾಜ್, ಹಿಂದಿನ ತಮಿಳು ರಾಜರು - ಚೇರ, ಚೋಳ ಮತ್ತು ಪಾಂಡ್ಯ - ಹಾಗೂ ಧೀರ ರಾಣಿ ವೇಲು ನಾಚಿಯಾರ್ ವರೆಗೆ ರಾಜಕೀಯ ದಿಗ್ಗಜರ ಬೃಹತ್ ಕಟೌಟ್ ಗಳಿಂದ ಸ್ಥಳವನ್ನು ಅಲಂಕರಿಸಲಾಗಿದೆ. ವಿಜಯ್ ಅವರ ಕಟೌಟ್ ಟಿವಿಕೆಗಳ ರಾಜಕೀಯ ದೃಷ್ಟಿಕೋನದ ಸೂಚನೆಯನ್ನು ನೀಡುವಂತೆ ಇವೆ.