ಮರಾಠವಾಡ: ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಾಗಿದೆ. ಪರ್ಭಾನಿ ಜಿಲ್ಲೆಯ ಪತ್ರಿ ಗ್ರಾಮದಲ್ಲಿ ಅತಿ ಹೆಚ್ಚು 314 ಮಿಮೀ ಮಳೆಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಾಥಮಿಕ ಅಂದಾಜಿನ ಪ್ರಕಾರ, ಕನಿಷ್ಠ 63 ಗ್ರಾಮಗಳ ಜನರು ಮಳೆ ಬಾಧಿತವಾಗಿದ್ದು, 45 ಹೆಕ್ಟೇರ್ ಪ್ರದೇಶದಲ್ಲಿನ ಕೆಲವು ಮನೆಗಳು ಮತ್ತು ಬೆಳೆಗಳಿಗೆ ಹಾನಿಯಾಗಿದೆ.ನಾಂದೇಡ್‌ನ ವಿಷ್ಣುಪುರಿ ಅಣೆಕಟ್ಟಿನ ಗೇಟ್‌ಗಳನ್ನು ಸೋಮವಾರ ಬೆಳಗ್ಗೆ ತೆರೆಯಲಾಗಿದೆ. ಜಯಕ್ವಾಡಿ ಅಣೆಕಟ್ಟಿನ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಗೋದಾವರಿ ನದಿಯ ಕೆಳಭಾಗದ ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಮರಾಠವಾಡದ ಎಲ್ಲಾ ಎಂಟು ಜಿಲ್ಲೆಗಳ 284 ಕಂದಾಯ ಗ್ರಾಮಗಳಲ್ಲಿ ಭಾನುವಾರ 65 ಮಿಮೀಗಿಂತ ಹೆಚ್ಚಿನ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಹಿಂಗೋಲಿ ಮತ್ತು ಸೆಂಗಾಂವ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರದಿಂದಲೇ ಸಿದ್ಧೇಶ್ವರ, ಜಯಕ್ವಾಡಿ ಮತ್ತು ವಿಷ್ಣುಪುರಿ ಅಣೆಕಟ್ಟುಗಳಿಂದ ನೀರು ಬಿಡುವ ಪ್ರಕ್ರಿಯೆ ಆರಂಭವಾಗಿದ್ದು, 11 ಪ್ರಮುಖ ಯೋಜನೆಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಶೇ.71.44ಕ್ಕೆ ಏರಿಕೆಯಾಗಿದೆ. ವಿಷ್ಣುಪುರಿ ಅಣೆಕಟ್ಟು ತುಂಬಿ ತುಳುಕುತ್ತಿದ್ದು, ಜಯಕ್ವಾಡಿಯಲ್ಲಿ ಶೇ.87.03ರಷ್ಟು ನೀರು ಸಂಗ್ರಹವಾಗಿದೆ. ನಾಂದೇಡ್ ನ ವಿಷ್ಣುಪುರಿ ಅಣೆಕಟ್ಟಿನ ಹತ್ತು ಗೇಟ್‌ಗಳನ್ನು ತೆಗೆಯಲಾಗಿದ್ದು, 1.01 ಲಕ್ಷ ಕ್ಯೂಸೆಕ್‌ನಷ್ಟು ನೀರನ್ನು ಹೊರಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 1 ರಂದು ಮಳೆಯ ನಡುವೆ ಕನಿಷ್ಠ ನಾಲ್ಕು ಜನರು ಮತ್ತು 88 ಪ್ರಾಣಿಗಳು ಸಾವನ್ನಪ್ಪಿವೆ. ಹಲವು ಮನೆಗಳು ಹಾನಿಗೊಳಗಾಗಿವೆ. ಅದೇ ರೀತಿ 18 ಗ್ರಾಮಗಳ 74 ರೈತರ 45.20 ಹೆಕ್ಟೇರ್ ಜಮೀನಿನ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.