ಜಮ್ಮು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದು, ತಮ್ಮ ಪಕ್ಷ, ಇಂಡಿಯಾ ಮೈತ್ರಿಕೂಟದ ಸಹಕಾರದೊಂದಿಗೆ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವುದನ್ನು ಖಚಿತಪಡಿಸುತ್ತದೆ ಎಂದು ಭರವಸೆ ನೀಡಿದರು.
"ವಿಧಾನಸಭಾ ಚುನಾವಣೆಗೂ ಮುನ್ನ ನಾವು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಲು ಬಯಸಿದ್ದೇವೆ. ಆದರೆ ಬಿಜೆಪಿ ಅದಕ್ಕೆ ಸಿದ್ಧವಿಲ್ಲ ಮತ್ತು ಮೊದಲು ಚುನಾವಣೆಯನ್ನು ನಡೆಸಬೇಕೆಂದು ಬಯಸಿದೆ" ಎಂದು ರಾಹುಲ್ ಗಾಂಧಿ ಹೇಳಿದರು.
"ಬಿಜೆಪಿ ಮಾಡಲಿ ಅಥವಾ ಮಾಡದಿರಲಿ ನಾವು ಮಾತ್ರ ಈ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನವನ್ನು ಹಿಂದಿರುಗಿಸುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ರಾಜ್ಯದ ಸ್ಥಾನಮಾನ ಮರುಸ್ಥಾಪಿಸಲು ನಾವು ಇಂಡಿಯಾ ಮೈತ್ರಿಕೂಟದ ಬ್ಯಾನರ್ ಅಡಿಯಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ" ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ತಿಳಿಸಿದ್ದಾರೆ.
ಕಣಿವೆಯಲ್ಲಿ ಮೂರು ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಸೆಪ್ಟೆಂಬರ್ 18 ರಂದು ಮೊದಲ ಹಂತದಲ್ಲಿ 25 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ರಾಂಬನ್ ಜಿಲ್ಲೆಯ ಬನಿಹಾಲ್ ವಿಧಾನಸಭಾ ಕ್ಷೇತ್ರದ ಭಾಗವಾದ ಸಂಗಲ್ದನ್‌ನಲ್ಲಿ ಇಂದು ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು.
ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ವಿಕಾರ್ ರಸೂಲ್ ವಾನಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿ ಸಾಜದ್ ಶಾಹೀನ್ ಮತ್ತು ಬಿಜೆಪಿಯ ಸಲೀಂ ಭಟ್ ಅವರಿಂದ ಪ್ರಮುಖ ಸವಾಲು ಎದುರಿಸುತ್ತಿದ್ದಾರೆ.