ನವದೆಹಲಿ: ವಿವಾದಗಳಲ್ಲಿ ಸಿಲುಕಿದ್ದ ಮಾಜಿ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರನ್ನು ಕೇಂದ್ರ ಸರ್ಕಾರ ಭಾರತೀಯ ಆಡಳಿತ ಸೇವೆಯಿಂದ ವಜಾಗೊಳಿಸಿದೆ. ಪೂಜಾ ಖೇಡ್ಕರ್ ಅವರು ಇತರ ಹಿಂದುಳಿದ ವರ್ಗಗಳು (OBC) ಮತ್ತು ಅಂಗವೈಕಲ್ಯ ಕೋಟಾ ಪ್ರಯೋಜನಗಳನ್ನು ವಂಚನೆ ಮತ್ತು ತಪ್ಪಾಗಿ ಪಡೆದ ಆರೋಪದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿತ್ತು.
ಮಾಜಿ ಪ್ರೊಬೇಷನರಿ ಸಿವಿಲ್ ಅಧಿಕಾರಿ ಪೂಜಾ ಖೇಡ್ಕರ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಭಾರತೀಯ ಆಡಳಿತ ಸೇವೆಯಿಂದ (ಐಎಎಸ್) ಕೇಂದ್ರ ಸರ್ಕಾರವು ವಜಾಗೊಳಿಸಿದೆ ಎಂದು ತಿಳಿಸಿವೆ. ಕೇಂದ್ರ ಸರ್ಕಾರವು 2024ರ ಸೆಪ್ಟೆಂಬರ್ 6ರ ಆದೇಶದ ಪ್ರಕಾರ, IAS (ಪ್ರೊಬೇಷನರಿ) ನಿಯಮಗಳು, 1954ರ ನಿಯಮ 12ರ ಅಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಖೇಡ್ಕರ್ ಅವರನ್ನು ಭಾರತೀಯ ಆಡಳಿತ ಸೇವೆಯಿಂದ ವಜಾಗೊಳಿಸಿದೆ.
ನಿಯಮಗಳ ಪ್ರಕಾರ, ಕೇಂದ್ರ ಸರ್ಕಾರವು ಪ್ರೊಬೇಷನರ್‌ಗಳು ಮರು ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ ಅಥವಾ ಕೇಂದ್ರ ಸರ್ಕಾರವು ಸೇವೆಗೆ ನೇಮಕಾತಿಗೆ ಅರ್ಹರಲ್ಲ ಅಥವಾ ಸೇವೆಯ ಸದಸ್ಯರಾಗಿರಲು ಅನರ್ಹರು ಎಂದು ಪರಿಗಣಿಸಿದರೆ ಅವರನ್ನು ಸೇವೆಯಿಂದ ವಜಾ ಮಾಡಬಹುದು. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಜುಲೈ 31ರಂದು ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಿತ್ತು. ಮುಂದಿನ ಪರೀಕ್ಷೆಗಳಿಂದ ಅವರನ್ನು ಡಿಬಾರ್ ಮಾಡಿದೆ.
ಎಲ್ಲಾ ಆರೋಪಗಳನ್ನು ಅಲ್ಲಗಳೆದ ಪೂಜಾ ಖೇಡ್ಕರ್
ಇದಕ್ಕೂ ಮುನ್ನ, ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ ಮಾಜಿ ಐಎಎಸ್ ಟ್ರೈನಿ ಪೂಜಾ ಖೇಡ್ಕರ್ ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದು, ತನ್ನ ಅಂಗವೈಕಲ್ಯ ಪ್ರಮಾಣಪತ್ರಗಳಲ್ಲಿ ಒಂದನ್ನು ನಕಲಿ ಎಂದು ಪೊಲೀಸರು ಪ್ರತಿಪಾದಿಸಿರುವುದರಿಂದ ತನ್ನ ವೈದ್ಯಕೀಯ ಪರೀಕ್ಷೆಯನ್ನು ಏಮ್ಸ್‌ನಲ್ಲಿ ಮಾಡಿಸಿಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ.
ಮಾಜಿ ತರಬೇತಿ ಅಧಿಕಾರಿ ವಿರುದ್ಧದ ಆರೋಪಗಳೇನು?
ಪೂಜಾ ಖೇಡ್ಕರ್ ಅವರು UPSC ಸಿವಿಲ್ ಸರ್ವೀಸಸ್ ಪರೀಕ್ಷೆ, 2022ರ ಮೀಸಲಾತಿ ಪ್ರಯೋಜನಗಳನ್ನು ಪಡೆಯಲು ತಮ್ಮ ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಜುಲೈ 31ರಂದು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ) ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಿತು. ಭವಿಷ್ಯದ ಪರೀಕ್ಷೆಗಳಿಂದ ಅವರನ್ನು ನಿರ್ಬಂಧಿಸಿತು. ಪೂಜಾ ಖೇಡ್ಕರ್ ತನ್ನ ಕೇಡರ್ ರಾಜ್ಯ ಮಹಾರಾಷ್ಟ್ರದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.