ಅಮರಾವತಿ: ಪೊಲೀಸರು ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ನಾಶಪಡಿಸುವ ವೇಳೆ ಅದನ್ನು ನೋಡಿ ಸಹಿಸಲಾಗದ ಮದ್ಯಪ್ರಿಯರು ಓಡೋಡಿ ಬಂದು ಮದ್ಯದ ಬಾಟಲಿ ಹಿಡಿದು ಓಡಿದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಡಂಪಿಂಗ್ ಯಾರ್ಡ್‌ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ನಾಶಪಡಿಸುವ ವೇಳೆ ಅದನ್ನು ನೋಡಿ ಸಹಿಸಲಾಗದ ಮದ್ಯಪ್ರಿಯರು ಓಡೋಡಿ ಬಂದು ಮದ್ಯದ ಬಾಟಲಿ ಹಿಡಿದು ಓಡಿದ್ದಾರೆ.
ಸ್ಥಳದಲ್ಲಿ ಹತ್ತಾರು ಪೊಲೀಸ್ ಸಿಬ್ಬಂದಿ ಇದ್ದರೂ ಕೊಂಚವೂ ಭಯವಿಲ್ಲದೇ ಮದ್ಯ ಪ್ರಿಯರು ಪೊಲೀಸರ ಎದುರೇ ಬಾಟಲಿಗಳನ್ನು ಹೊತ್ತೊಯ್ದಿದ್ದಾರೆ.
ಗುಂಟೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಅಕ್ರಮ ಮದ್ಯವನ್ನು ಪೊಲೀಸರು ನಾಶಪಡಿಸಲು ಮುಂದಾಗಿದ್ದರು. ಜಿಲ್ಲೆಯಾದ್ಯಂತ 50 ಲಕ್ಷ ಮೌಲ್ಯದ 24,031 ಮದ್ಯದ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಸೋಮವಾರ ಜಿಲ್ಲಾ ಎಸ್ಪಿ ಸತೀಶ್ ಕುಮಾರ್ ನೇತೃತ್ವದಲ್ಲಿ ಏಟುಕೂರು ರಸ್ತೆಯ ನಲ್ಲಚೆರುವಿನ ಡಂಪಿಂಗ್ ಯಾರ್ಡ್‌ನಲ್ಲಿ ಅಕ್ರಮ ಮದ್ಯ ನಾಶಕ್ಕೆ ಎಲ್ಲ ಸಿದ್ಧತೆ ನಡೆಸಿದ್ದರು.
ಮದ್ಯದ ಬಾಟಲಿಗಳನ್ನು ಜೋಡಿಸಿಟ್ಟು ಅದರ ಮೇಲೆ ಜೆಸಿಬಿ ವಾಹನವನ್ನು ಹರಿಸಿ ಅವುಗಳನ್ನು ಧ್ವಂಸ ಮಾಡುವುದು ಪೊಲೀಸರ ಯೋಜನೆಯಾಗಿತ್ತು. ಇನ್ನೇನು ಮದ್ಯದ ಬಾಟಲಿಗಳನ್ನು ಜೆಸಿಬಿ ನಾಶಪಡಿಸುತ್ತದೆ ಎನ್ನವಾಗಲೇ ಏಕಾಏಕಿ ನುಗ್ಗಿದ ಮದ್ಯ ಪ್ರಿಯರು ಕೈಗೆ ಸಿಕ್ಕಷ್ಟು ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಪರಾರಿಯಾದರು.
ಒಬ್ಬರ ಹಿಂದೆ ಒಬ್ಬರಂತೆ ನೂರಾರು ಮಂದಿ ಮದ್ಯಪ್ರಿಯರು ಮದ್ಯದ ಬಾಟಲಿಗಳನ್ನು ಹೊತ್ತು ಪರಾರಿಯಾದರು. ಈ ವೇಳೆ ಪೊಲೀಸರು ಅವರನ್ನು ತಡೆಯಲು ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.
ತಡೆಯಲಾಗಲಿಲ್ಲ ಸಾರ್!!
ಇನ್ನು ಇದೇ ವಿಚಾರವಾಗಿ ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿರುವ ಬಾಟಲಿ ಹೊತ್ತೊಯ್ದ ಮದ್ಯಪ್ರಿಯರೊಬ್ಬರು, ಪೊಲೀಸರು ಮದ್ಯದ ಬಾಟಲಿಗಳನ್ನು ನಾಶ ಮಾಡುತ್ತಿದ್ದರೆ ಅದನ್ನು ನೋಡಿಕೊಂಡು ಸುಮ್ಮನಿರಲಾಗಲಿಲ್ಲ ಸಾರ್.. ಹೀಗಾಗಿ ಧೈರ್ಯ ಮಾಡಿ ಓಡಿ ಹೋಗಿ ಬಾಟಲಿ ಎತ್ತಿಕೊಂಡು ಬಂದೆ ಎಂದು ಹೇಳಿದ್ದಾರೆ.
ಒಟ್ಟಾರೆ ಈ ಪೊಲೀಸರು ಮತ್ತು ಮದ್ಯ ಪ್ರಿಯರ ನಡುವಿನ ಬಾಟಲಿ ಪ್ರಸಂಗ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.